ಬೆಳಗಾವಿ ಕಾಂಗ್ರೆಸ್ ಅಧಿವೇಶನ : ಹರಿದು ಬಂದ ಕಾಂಗ್ರೆಸ್ ನಾಯಕರ ದಂಡು

ಬೆಳಗಾವಿ

    ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ‘ಗಾಂಧಿ ಭಾರತ’ ಹೆಸರಿನ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ದೇಶದ ವಿವಿಧೆಡೆಯಿಂದ ಕಾಂಗ್ರೆಸ್ ನಾಯಕರ ದಂಡೇ ಬರತೊಡಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಪ್ರಮುಖರು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಹಿಮಾಚಲ ಪ್ರದೇಶ ಮುಖ್ಯ ಮಂತ್ರಿ ಸುಖ್ವಿಂದರ್ ಸಿಂಗ್ ಸುಕ್ಕು, ಮಾಜಿ ಕೇಂದ್ರ ಸಚಿವ ಶಶಿ ತರೂರ್, ಕಾಂಗ್ರೆಸ್ ಯುವ ನಾಯಕ ಕನ್ನಯ್ಯಾ ಕುಮಾರ ಗುರುವಾರ ಬೆಳಗ್ಗೆ ಬೆಳಗಾವಿಗೆ ಆಗಮಿಸಿದರು.

   ಕರ್ನಾಟಕ ವಿಧಾನಸಭೇ ಸ್ಪೀಕರ್ ಯುಟಿ ಖಾದರ್ ಕೂಡ ಬೆಳಗಾವಿಗೆ ಆಗಮಿಸಿದ್ದಾರೆ. ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ನೇತೃತ್ವ ತಂಡದಿಂದ ಮುಖಂಡರುಗಳಿಗೆ ಸ್ವಾಗತ ಕೋರಲಾಯಿತು. ಲಂಬಾಣಿ ಹಾಡು ನೃತ್ಯದ ಮೂಲಕ ಯುವತಿಯರಿಂದ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

  ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಪ್ರಯುಕ್ತ ಬೆಳಗಾವಿ ನಗರದೆಲ್ಲೆಡೆ ಕಾಂಗ್ರೆಸ್ ಬಾವುಟ, ನಾಯಕರ ಕಟೌಟ್​ ರಾರಾಜಿಸುತ್ತಿವೆ.

   ಇಂದು ಮಧ್ಯಾಹ್ನ 3 ಗಂಟೆಗೆ ಎಐಸಿಸಿ ಕಾರ್ಯಕಾರಣಿ ಸಮಿತಿ ಸಭೆ ನಡೆಯಲಿದೆ. ಬೆಳಗಾವಿ ಟಿಳಕವಾಡಿಯ ವೀರಸೌಧದಲ್ಲಿ ಎಐಸಿಸಿ ಅಧ್ಯಕ್ಷ ‌ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಅಂದು ಗಾಂಧೀಜಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದರೆ, ಇಂದು ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.  

    ಖರ್ಗೆ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ರಾಹುಲ್​ ಗಾಂಧಿ, ಪ್ರಿಯಾಂಕ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ 200ಕ್ಕೂ ಹೆಚ್ಚು ಕಾಂಗ್ರೆಸ್​ ನಾಯಕರು ಭಾಗವಹಿಸಲಿದ್ದಾರೆ.

   ಶುಕ್ರವಾರ ಬೆಳಗ್ಗೆ 10.30ಕ್ಕೆ ಸುವರ್ಣಸೌಧದಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಗೊಳ್ಳಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ಥಳಿ ಅನಾವರಣ ಮಾಡಲಿದ್ದಾರೆ. ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿ ‘ಕೈ’ ನಾಯಕರು ಭಾಗಿಯಾಗಲಿದ್ದಾರೆ. ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದ ನಾಯಕರಿಗೆ ಆಹ್ವಾನ ನೀಡಲಾಗಿದೆ. ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಸಮಾವೇಶ ನಡೆಯಲಿದೆ. ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಜೈ ಬಾಪು, ಜೈ ಭೀಮ, ಜೈ ಸಂವಿಧಾನ’’ ಹೆಸರಿನಲ್ಲಿ ಸಮಾವೇಶ ನಡೆಯಲಿದೆ. 

  ಗಾಂಧಿ ಭಾರತ ಕಾರ್ಯಕ್ರಮ ಹಿನ್ನೆಲೆ ಬೆಳಗಾವಿ ತಾಲೂಕಿನ ಶಾಲೆಗಳಿಗೆ ಇಂದು, ನಾಳೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿ ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ 2 ದಿನ ರಜೆ ಘೋಷಣೆ ಮಾಡಿ ಡಿಸಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.

Recent Articles

spot_img

Related Stories

Share via
Copy link