ಬೆಳಗಾವಿ: ಯುವಕನಿಂದ ದೇವಾಲಯದ ಮೇಲೆ ಕಲ್ಲು ತೂರಾಟ

ಬೆಳಗಾವಿ

     ಅನ್ಯಕೋಮಿನ ಯುವಕನೊಬ್ಬ ಬೆಳಗಾವಿ ನಗರದ ಪಾಂಗುಳ ಗಲ್ಲಿಯಲ್ಲಿ  ಅಶ್ವತ್ಥಾಮ‌ ದೇವಸ್ಥಾನಕ್ಕೆ ಕಲ್ಲು ತೂರಾಟ ಮಾಡಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಗುಂಪು ಗುಂಪಾಗಿ ನಿಂತಿರುವ ಜನ, ಯುವಕನನ್ನು ಹಿಡಿದು ವಿಚಾರಿಸುತ್ತಿರುವ ಸ್ಥಳೀಯರು, ಬಿಗಿ ಪೊಲೀಸ್ ಬಂದೋಬಸ್ತ್​ಗೆ ಪಾಂಗುಳ ಗಲ್ಲಿ ಸಾಕ್ಷಿಯಾಯಿತು. ಉಜ್ವಲ್ ನಗರದ ನಿವಾಸಿ ಯಾಸೀರ್ ಎಂಬಾತ ಬುಧವಾರ ರಾತ್ರಿ ದೇಗುಲಕ್ಕೆ ಕಲ್ಲು ತೂರಿದ್ದಾನೆ.

    ತಕ್ಷಣವೇ ಧಾವಿಸಿ ಬಂದ ಸ್ಥಳೀಯರು ಯಾಸೀರ್​​ನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದಾರೆ. ಸ್ಥಳಿಯರು ಹಲ್ಲೆಗೆ ಮುಂದಾಗುತ್ತಿದ್ದಂತೆಯೇ ಬಾಯ್ಬಿಟ್ಟ ಯಾಸೀರ್, ‘‘ತಪ್ಪು ಮಾಡಿದ್ದೇನೆ ಕ್ಷಮಿಸಿಬಿಡಿ. ಮಂದಿರಕ್ಕೆ ಕಲ್ಲು ಹೊಡೆದಿದ್ದೇನೆ. ಮೊನ್ನೆ ಒಬ್ಬ ಬುರ್ಕಾ ಹಾಕಿ ಡ್ಯಾನ್ಸ್ ಮಾಡಿದ್ದನಲ್ಲಾ ಅದಕ್ಕೆ’’ ಎಂದಿದ್ದಾನೆ. ಮದ್ಯಪಾನದ ನಶೆಯಲ್ಲಿ ಕೃತ್ಯ

    ಮೊನ್ನೆ ಹೋಳಿ ಹಬ್ಬದ ದಿನ ಕೆಲವರು ಬುರ್ಖಾ ಹಾಕಿ ಡ್ಯಾನ್ಸ್ ಮಾಡಿದ್ದರು. ಅದಕ್ಕೆ ಸಿಟ್ಟಿನಿಂದ ದೇವಸ್ಥಾನಕ್ಕೆ ಕಲ್ಲುಹೊಡೆದಿರುವುದಾಗಿ ಮದ್ಯಪಾನದ ನಶೆಯಲ್ಲಿದ್ದ ಆರೋಪಿ‌ ಯಾಸೀರ್ ಬಾಯಿಬಿಟ್ಟಿದ್ದಾನೆ. ಸ್ಥಳೀಯರು ಯಾಸೀರ್​ನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದು, ನಂತರ ಬೆಳಗಾವಿಯ ಮಾರ್ಕೆಟ್‌ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.‌ ಅಷ್ಟೇ ಅಲ್ಲದೆ ಠಾಣೆಯ ಮುಂದೆ ಜಮಾಯಿಸಿ ಆರೋಪಿಗೆ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. 

    ನಗರ ಪೊಲೀಸರು ಅಹಿತರಕ ಘಟನೆಗಳು ನಡೆಯದಿರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಪಾಂಗಳು ಗಲ್ಲಿಯಲ್ಲಿ ಒಂದು ಕೆಎಸ್​​ಆರ್​ಪಿ ತುಕಡಿ ನಿಯೋಜಿಸಿದ್ದಾರೆ. ಪಿಎಸ್​ಐ ನೇತೃತ್ವದಲ್ಲಿ ಭದ್ರತೆ‌ ಹೆಚ್ಚಿಸಿದ್ದಾರೆ.‌ ಒಂದೆಡೆ, ಭಾಷೆಯ ಸಂಘರ್ಷದ ಕುಲುಮೆಯಲ್ಲಿ ಗಡಿಜಿಲ್ಲೆ ಬೆಳಗಾವಿ ಉದ್ವಿಗ್ನಗೊಂಡಿದ್ದರೆ, ಇತ್ತ ಇಂಥಾ ಕಿಡಿಗೇಡಿಗಳ ಕೃತ್ಯದಿಂದ ಕೋಮು‌ ಸೌಹಾರ್ದತೆಗೂ ಧಕ್ಕೆ ಬರುತ್ತಿದೆ.‌ ಸದ್ಯ ಯುವಕನ ಬಂಧನವಾಗಿದ್ದು, ಸ್ಥಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

    ದಿನದ ಹಿಂದಷ್ಟೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಸಾಮಾಜಿಕ ಮಾಧ್ಯಮ ಸ್ಟೇಟಸ್ ಒಂದರ ಪರಿಣಾಮ ಕಲ್ಲು ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅದು ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಷ್ಟರಲ್ಲೇ ಪಾಂಗುಳ ಗಲ್ಲಿಯಲ್ಲಿ ಸಮಸ್ಯೆ ತಲೆದೋರಿದೆ. ಹೋಳಿ ಹಬ್ಬ ಆಚರಣೆ ನಂತರ ಯುವಕನೊಬ್ಬ ವಾಟ್ಸಾಪ್‌ನಲ್ಲಿ ಅಂಬೇಡ್ಕರ್ ಕುರಿತು ಸ್ಟೇಟಸ್ ಹಾಕಿಕೊಂಡಿದ್ದ. ಇದು ಸಂಘರ್ಷಕ್ಕೆ ಕಾರಣವಾಗಿತ್ತು. ಈ ವಿಚಾರಕ್ಕೆ ಎರಡು ಸಮುದಾಯದ ಯುವಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಂಬೇಡ್ಕರ್ ಕಾಲೋನಿಯ ಜನರು ಹಾಗೂ ಬೇರೊಂದು ಸಮುದಾಯದ ಜನರ ನಡುವೆ ಕಲ್ಲು ತೂರಾಟವೂ ನಡೆದಿತ್ತು. ಕೆಲವೇ ದಿನಗಳ ಹಿಂದಷ್ಟೇ ಬಸ್ ಕಂಡಕ್ಟರ್ ಮೇಲಿನ ಹಲ್ಲೆಯಿಂದಾಗಿ ಬೆಳಗಾವಿ ಉದ್ವಿಗ್ನಗೊಂಡಿತ್ತು. ಒಟ್ಟಿನಲ್ಲಿ ಒಂದಿಲ್ಲೊಂದು ಕಾರಣಕ್ಕೆ ಬೆಳಗಾವಿಯಲ್ಲಿ ಶಾಂತಿಕದಡುತ್ತಿದೆ.

Recent Articles

spot_img

Related Stories

Share via
Copy link