ಬೆಂಗಳೂರು
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಬೆಳ್ಳಂದೂರು ರೈಲು ನಿಲ್ದಾಣಕ್ಕೆ ಬೆಳ್ಳಂದೂರು ರೋಡ್ ಎಂದು ಹೆಸರು ಇಡಲಾಗಿದೆ. ಇದಕ್ಕೆ ಪಣತ್ತೂರಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈಲ್ವೆ ನಿಲ್ದಾಣಕ್ಕೆ ಜಾಗ ನೀಡಿದ್ದು ಪಣತ್ತೂರಿನ ಜನರು, ಆದರೆ, ಹೆಸರು ಮಾತ್ರ ಐದು ಕಿಮೀ ದೂರದಲ್ಲಿರುವ ಬೆಳ್ಳಂದೂರು ಹೆಸರಿಟ್ಟಿದ್ದಾರೆ ಎಂದು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಿದರು.
ಈ ಬಗ್ಗೆ ಸಾಕಷ್ಟು ಬಾರಿ ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಅವರಿಗೆ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೀಗ, ಬೆಳ್ಳಂದೂರು ರೈಲ್ವೆ ನಿಲ್ದಾಣವನ್ನು ಕೋಟ್ಯಾಂತರ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಮತ್ತೆ ಬೆಳ್ಳಂದೂರು ರೋಡ್ ಎಂದು ಹೊಸ ಬೋರ್ಡ್ ಹಾಕಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ಇಲ್ಲದ ಪ್ರಯಾಣಿಕರು ಬೆಳ್ಳಂದೂರು ಎಂದು ಕ್ಯಾಬ್, ಆಟೋ ಬುಕ್ ಮಾಡಿಕೊಂಡು ಬೆಳ್ಳಂದೂರಿಗೆ ಹೋಗಿ ಮತ್ತೆ ಪಣತ್ತೂರಿಗೆ ವಾಪಸ್ಸು ಬಂದು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಣತ್ತೂರಿನ ನಿವಾಸಿಗಳು ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಅವರಿಗೆ ಸ್ಥಳೀಯ ನಿವಾಸಿಗಳು ಸಹಿ ಸಂಗ್ರಹ ಮಾಡಿ, ಬೆಳ್ಳಂದೂರು ರೋಡ್ ರೈಲ್ವೆ ನಿಲ್ದಾಣ ಹೆಸರನ್ನು ಪಣತ್ತೂರು ಎಂದು ಮರುನಾಮಕರಣ ಮಾಡಿ ಎಂದು ಮನವಿ ಮಾಡಿದರು.
ಈ ಬಗ್ಗೆ ಸಂಸದ ಪಿಸಿ ಮೋಹನ್ ಮಾತನಾಡಿ, ಈಗಾಗಲೇ ಈ ಬಗ್ಗೆ ರೈಲ್ವೆ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಸಂಸತ್ತಿನಲ್ಲಿನಲ್ಲಿದ್ದೀನಿ ಬಂದ ನಂತರ ಮತ್ತೊಮ್ಮೆ ರೈಲ್ವೆ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇ ಎಂದು ಹೇಳಿದರು.
ಒಟ್ಟಿನಲ್ಲಿ ರೈಲು ನಿಲ್ದಾಣ ಇರುವುದು ಪಣತ್ತೂರಿನಲ್ಲಿ, ರೈಲ್ವೆ ನಿಲ್ದಾಣಕ್ಕೆ ಜಾಗ ಕೊಟ್ಟಿದ್ದು ಪಣತ್ತೂರಿನ ಜನರು. ಆದರೆ, ರೈಲ್ವೆ ನಿಲ್ದಾಣಕ್ಕೆ ಹೆಸರು ಮಾತ್ರ ಐದು ಕಿಮೀ ದೂರದಲ್ಲಿರುವ ಬೆಳ್ಳಂದೂರುದ್ದು. ಇದನ್ನು ಯಾರು ಒಪ್ಪುತ್ತಾರೆ ಹೇಳಿ. ಈ ಕೂಡಲೇ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಪಣತ್ತೂರಿನ ಜನರು ಆಗ್ರಹಿಸಿದರು.