ಗದಗ: ಬೆಳೆ ವಿಮೆಯಲ್ಲಿ ಭಾರಿ ಅಕ್ರಮ….!

ಗದಗ

    ಗದಗ ಜಿಲ್ಲೆಯಲ್ಲಿ ಬೆಳೆ ವಿಮೆಯಲ್ಲಿ ಭಾರಿ ಗೊಲ್ಮಾಲ್ ನಡೆದಿರುವ ಆರೋಪ ಕೇಳಿಬರುತ್ತಿದೆ. ಮಧ್ಯವರ್ತಿಗಳ ಮುಖಾಂತರ ವಿಮೆ ಮಾಡಿಸಿದ ರೈತರ ಅಕೌಂಟ್​ಗೆ ಹಣ ಜಮೆಯಾಗುತ್ತಿದೆ. ಕೃಷಿ ಇಲಾಖೆ ಹಾಗೂ ಆನ್ಲೈನ್ ಮುಖಾಂತರ ಬೆಳೆ ವಿಮೆ ಮಾಡಿದ ರೈತರ ಖಾತೆಗೆ ವಿಮೆ ಮೊತ್ತ ಜಮೆಯಾಗುತ್ತಿಲ್ಲ ಎನ್ನಲಾಗಿದೆ.

    ಹೀಗಾಗಿ ಅನ್ನದಾತರು ರೊಚ್ಚಿಗೆದ್ದಾರೆ. ಅಂದಹಾಗೆ, ಗದಗ ಜಿಲ್ಲೆ ರೋಣ ತಾಲೂಕಿನ ಯಾ ಸಾ ಹಡಗಲಿ ಹಾಗೂ ಯಾವಗಲ್ ಸೇರಿದಂತೆ, ಹೊಳೆ ಆಲೂರು ಹೊಂಬಳಿ ಪ್ರದೇಶದಲ್ಲಿ ಅತೀ ಹೆಚ್ಚು ಗೋವಿನಜೋಳ ನಾಶವಾಗಿತ್ತು. ಮುಂಗಾರು ಹಂಗಾಮಿನಲ್ಲಿ ಈ ಭಾಗದ ರೈತರ ಗೋವಿನಜೋಳ ಬೆಳೆಯನ್ನು ಬೆಳೆದಿದ್ರು. ಆ ಸಮಯದಲ್ಲಿ ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ನದಿ ನೀರು‌ ಹಾಗೂ ಮಳೆಯಿಂದ ಗೋವಿನಜೋಳ ಬೆಳೆ ನಾಶವಾಗಿತ್ತು.

   ಆ ಸಮಯದಲ್ಲಿ ರೈತರ ಗೋವಿನಜೋಳಕ್ಕೆ ಓರಿಯಂಟಲ್ ವಿಮಾ ಕಂಪನಿಗೆ ಬೆಳೆ ವಿಮೆ ಮಾಡಿದ್ದರು. ಆದ್ರೆ ಈಗ ಗೋವಿನಜೋಳ ಬೆಳೆ ನಾಶವಾದ ರೈತರ ಅಕೌಂಟ್ಗೆ ಹಣ ಜಮಾ ಆಗುತ್ತಿದೆ. ಅದು ಮಧ್ಯವರ್ತಿಗಳ ಮುಖಾಂತರ ಮಾಡಿಸಿ ರೈತರ ಮಾತ್ರ ಅಂತೆ! ಹೀಗಾಗಿ ಉಳಿದ ರೈತರು ಇದರಲ್ಲಿ ಬಹುದೊಡ್ಡ ಗೊಲ್ಮಾಲ್ ನಡೆದಿದ್ದು, ಮಧ್ಯವರ್ತಿಗಳು ರೈತ ಹೆಸರಿನಲ್ಲಿ ವಿಮೆ ಮಾಡಿ,‌ ಹಣ ಲೂಟಿ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ರೈತರು ಆರೋಪ ಮಾಡಿದ್ದಾರೆ. 

    ಮಧ್ಯವರ್ತಿಗಳ ಮುಖಾಂತರ ವಿಮೆ ಮಾಡಿದ ರೈತರಿಗೆ, ಒಂದು ಎಕರೆ ಪ್ರದೇಶಕ್ಕೆ 17 ಸಾವಿರ ರೂಪಾಯಿಯಂತೆ ಹಣ ಬಂದಿದೆ. ಆದ್ರೆ ಕೃಷಿ ಇಲಾಖೆಗೆ ಹೋಗಿ ವಿಮೆ ಮಾಡಿದ ರೈತರಿಗೆ ಹಣ ಬಂದಿಲ್ಲ.‌ ಹೀಗಾಗಿ ಮಧ್ಯವರ್ತಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು ಗೊಲ್ಮಾಲ್ ಮಾಡಿದ್ದಾರೆ ಎಂದು ರೈತರು ಆರೋಪ‌‌ ಮಾಡಿದ್ದಾರೆ. ಗದಗ ಜಿಲ್ಲೆಯಾದ್ಯಂತ ಬೆಳೆ ವಿಮೆಯಲ್ಲಿ ಅರ್ಧ ಹಣ ರೈತರಿಗೆ, ಇನ್ನೂ ಅರ್ಧ ಹಣ ಮಧ್ಯವರ್ತಿಗಳಿಗೆ ಎಂಬ ರೀತಿ ವ್ಯವಹರಿಸುವ ದೊಡ್ಡದೊಂದು ಜಾಲ ಇದೆ ಎನ್ನುವ ಆರೋಪವೂ ಕೇಳಿಬಂದಿದೆ.

   ಸದ್ಯ ಗೋವಿನಜೋಳ ವಿಮೆಯಲ್ಲಿ ಗೊಲ್ಮಾಲ್ ಆಗಿದೆ ಎಂದು ಎರಡು ಗ್ರಾಮಗಳ ರೈತರು ಗದಗ ನಗರದ‌ ಕೃಷಿ ಇಲಾಖೆ ಕಚೇರಿಗೆ ಬಂದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

   ಯಾರಾದರೂ ಮಧ್ಯವರ್ತಿಗಳು ಹೀಗೆ ಮಾಡಿದ್ದರೆ, ಅವರ ಮೇಲೆ ದೂರು ದಾಖಲು ಮಾಡುತ್ತೇವೆ. ಆ ಬಗ್ಗೆ ಮಾಹಿತಿ ನೀಡಿ ಎಂದು ಫೀಲ್ಡ್ ಮ್ಯಾನೇಜರ್ ಹೇಳಿದ್ದಾರೆ. ಹೊಳೆ ಆಲೂರು ಹೊಬಳಿ ಭಾಗದಲ್ಲಿ ಗೋವಿನಜೋಳಕ್ಕೆ ವಿಳೆ ವಿಮೆ ಮೊತ್ತ ಬರುತ್ತಿದ್ದು, ಈವಾಗ ಕೆಲ ರೈತರ ಅಕೌಂಟ್‌ಗೆ ಹಣ ಜಮಾ ಆಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ರೈತರಿಗೂ ಹಂತ ಹಂತವಾಗಿ ಜಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. 

  ಸಾಲ ಸೋಲ ಮಾಡಿ ಬೆಳೆಯನ್ನು ಬೆಳೆದ ರೈತರಿಗೆ ಮಳೆಯಿಂದ ಅಪಾರ ನಾಶವಾಗಿತ್ತು. ವಿಮೆ ಆದರೂ ಸಿಗಬಹುದು ಎನ್ನುವ ಲೆಕ್ಕಾಚಾರ ಅನ್ನದಾತರದಾಗಿತ್ತು. ಆದರೆ ಈಗ ವಿಮೆ ಮಾಡಿದ ಎಲ್ಲ ರೈತರಿಗೆ ಬಾರದೆ, ಕೆಲ ರೈತರಿಗೆ ಮಾತ್ರ ಬರುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Recent Articles

spot_img

Related Stories

Share via
Copy link