ಕಬ್ಬಿಗೆ ಯೋಗ್ಯ ಬೆಲೆ ನೀಡುತ್ತಿಲ್ಲ ಎಂಬ ಬೆಳೆಗಾರರ ಅಸಮಾಧಾನ, ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಹಗ್ಗಜಗ್ಗಾಟ, ಹವಾಮಾನ ಅಸಮತೋಲನ, ಮಹಾಮಾರಿ ಕರೊನಾ ಸೇರಿ ಹಲವಾರು ಪ್ರತಿಕೂಲ ವಾತಾವರಣದ ನಡುವೆಯೂ ಈ ವರ್ಷ ದೇಶದ 504 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮನ್ನು ಬಹುತೇಕ ಪೂರ್ಣಗೊಳಿಸಿವೆ.
ಫೆ.20ರ ವರೆಗೆ ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವುದನ್ನು ಮುಗಿಸಿ, ಬಂದ್ ಮಾಡಲಿವೆ. ಈ ನಡುವೆ ಬೆಳಗಾವಿಯ 26 ಕಾರ್ಖಾನೆಗಳು 1.34 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಿ, 13.21 ಲಕ್ಷ ಟನ್ ಸಕ್ಕರೆ ಉತ್ಪಾದಿಸುವ ಮೂಲಕ ರಾಜ್ಯದಲ್ಲಿಯೇ ಸಕ್ಕರೆ ಉತ್ಪಾದನೆಯಲ್ಲಿ ನಂ.1 ಸ್ಥಾನ ಗಳಿಸಿವೆ.
– ರಾಯಣ್ಣ ಆರ್.ಸಿ. ಬೆಳಗಾವಿ
ದೇಶಾದ್ಯಂತ ಪ್ರಸಕ್ತ ಸಾಲಿನಲ್ಲಿ(2021-22)ಕಬ್ಬು ನುರಿಸುವ ಹಂಗಾಮಿನಲ್ಲಿ 504 ಸಕ್ಕರೆ ಕಾರ್ಖಾನೆಗಳು 151.41 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡಿವೆ. ಇದು ಕಳೆದ ವರ್ಷಕ್ಕೆ ಹೊಲಿಸಿದರೆ, 8.63 ಲಕ್ಷ ಟನ್ಗಳಷ್ಟು ಅಧಿಕ ಉತ್ಪಾದನೆಯಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ 192 ಸಕ್ಕರೆ ಕಾರ್ಖಾನೆಗಳು 2022ರ ಜನವರಿ 15ಕ್ಕೆ 58.84 ಲಕ್ಷಟನ್ ಸಕ್ಕರೆ ಉತ್ಪಾದಿಸಿವೆ.
ಕಳೆದ ವರ್ಷ ಇದೇ ಅವಧಿಗೆ 181 ಕಾರ್ಖಾನೆಗಳು 51.55 ಲಕ್ಷ ಟನ್ ಸಕ್ಕರೆ ಉತ್ಪಾದಿಸಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ 7.29 ಲಕ್ಷ ಟನ್ ಅಧಿಕ ಸಕ್ಕರೆ ಉತ್ಪಾದಿಸುವ ಮೂಲಕ ಇಡೀ ದೇಶಕ್ಕೆ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದೆ.
ಇನ್ನೂ ಸಾಂಗಲಿ, ಕೊಲ್ಲಾಪುರ, ಸಾತಾರ ಭಾಗಗಳಲ್ಲಿ ಕಬ್ಬು ನುರಿಸುವುದನ್ನು ಸಕ್ಕರೆ ಕಾರ್ಖಾನೆಗಳು ಮುಂದುವರಿಸಿದ್ದು, ಏಪ್ರಿಲ್ 15ಕ್ಕೆ ಕಬ್ಬು ನುರಿಸುವ ಹಂಗಾಮು ಮುಗಿಯುವ ನಿರೀಕ್ಷೆಯಿದೆ. ಸೊಲ್ಲಾಪುರ ಭಾಗದಲ್ಲಿಯೂ ಈ ಬಾರಿ ಕಬ್ಬಿನ ಬೆಳೆ ಚೆನ್ನಾಗಿದೆ ಎಂದು ಸಕ್ಕರೆ ಇಲಾಖೆ ಮೂಲಗಳು ತಿಳಿಸಿವೆ.
ಈ ವರ್ಷ ಉತ್ತರ ಪ್ರದೇಶದಲ್ಲಿ 120 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿದ್ದು, 40.17 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡಿವೆ. ಕರ್ನಾಟಕದಲ್ಲಿ 2022ರ ಜನವರಿ 14ಕ್ಕೆ 69 ಸಕ್ಕರೆ ಕಾರ್ಖಾನೆಗಳು 3.59 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಿ,
31.02 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಈಗಾಗಲೆ ಬಹುತೇಕ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮನ್ನು ಮುಗಿಸಿವೆ. ಆದರೆ 40ಕ್ಕೂ ಹೆಚ್ಚು ಕಾರ್ಖಾನೆಗಳು ಮಾತ್ರ ಇನ್ನೂ ಕಾರ್ಯನಿರ್ವಹಿಸುತ್ತಿವೆ.
ಬೆಳಗಾವಿಯಲ್ಲಿ ಹೆಚ್ಚು ಉತ್ಪಾದನೆ
ಬೆಳಗಾವಿಯಲ್ಲಿ ಈ ವರ್ಷ 26 ಕಾರ್ಖಾನೆಗಳು 1.34 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಿ, 13.21 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ರಾಜ್ಯದ ಸಕ್ಕರೆ ಕಾರ್ಖಾನೆಗಳ ಇಳುವರಿ ಅವಲೋಕಿಸಿದಾಗ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಬೇಡಿಕಿಹಾಳದಲ್ಲಿರುವ ವೆಂಕಟೇಶ್ವರ ಪಾವರ್ ಪ್ರೋಜೆಕ್ಟ್ ಸಕ್ಕರೆ ಕಾರ್ಖಾನೆಯೂ 12.10 ಇಳುವರಿ ಪಡೆಯುವುದರ ಮೂಲಕ ಇಡೀ ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದೆ.
ಬಾಗಲಕೋಟೆ ಜಿಲ್ಲೆಯ 12 ಕಾರ್ಖಾನೆಗಳು 92.40 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 6.12 ಲಕ್ಷ ಟನ್ ಸಕ್ಕರೆ ಉತ್ಪಾದಿಸಿ, ಸಕ್ಕರೆ ಉತ್ಪಾದನೆಯಲ್ಲಿ ದ್ವೀತಿಯ ಸ್ಥಾನದಲ್ಲಿವೆ. ಮುಧೋಳ ತಾಲೂಕು ಉತ್ತುರ ಗ್ರಾಮದಲ್ಲಿರುವ ಇಂಡಿಯನ್ ಕೇನ್ ಪಾವರ್ ಲಿ. ಕಾರ್ಖಾನೆಯೂ 14.44 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 1.39 ಲಕ್ಷ ಟನ್ ಸಕ್ಕರೆ ಉತ್ಪಾದಿಸುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದು, ಬೆಳಗಾವಿ ಜಿಲ್ಲೆ ಅಥಣಿ ಶುಗರ್ಸ್ ಕಾರ್ಖಾನೆಯೂ 12.35 ಮೆಟ್ರಿಕ್ ಟನ್ ಕಬ್ಬು ನುರಿಸಿ, 1.35 ಲಕ್ಷ ಟನ್ ಸಕ್ಕರೆ ಉತ್ಪಾದಿಸಿ ದ್ವೀತಿಯ ಸ್ಥಾನದಲ್ಲಿದೆ.
ಹೆಚ್ಚುತ್ತಿರುವ ಸಕ್ಕರೆ ಬಳಕೆ
ಕ್ಷೀಪ್ರಗತಿಯಲ್ಲಿ ಬೆಳೆಯುತ್ತಿರುವ ನಗರೀಕರಣ ಮತ್ತು ಬದಲಾಗುತ್ತಿರುವ ಜನರ ಆಹಾರ ಪದ್ಧತಿ ಅವಲೋಕಿಸಿದರೆ ದೇಶದಲ್ಲಿ ಸಕ್ಕರೆ ಬಳಕೆ ಪ್ರಮಾಣ ಮುಂದಿನ ಐದು ವರ್ಷಗಳಲ್ಲಿ 300 ಲಕ್ಷ ಟನ್ಗಳಿಗಿಂತಲೂ ಅಧಿಕವಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ ಅಂದಾಜು ಮಾಡಿದೆ. ವಿಶ್ವದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ 1700 ಲಕ್ಷ ಟನ್ಗಳಷ್ಟಿದೆ.
ಈ ಪೈಕಿ ಭಾರತ ಶೇ.15 ದೊಡ್ಡ ಪಾಲನ್ನು ಹೊಂದುವ ಮೂಲಕ ಅತಿ ಹೆಚ್ಚು ಸಕ್ಕರೆ ಬಳಕೆ ಮಾಡುವ ದೇಶವಾಗಿ ಹೊರಹೊಮ್ಮಿದೆ. ದೇಶದ ಸಕ್ಕರೆ ಬಳಕೆ ಪ್ರತಿವರ್ಷ ಸರಾಸರಿ ಶೇ.2 ಪ್ರಮಾಣದಲ್ಲಿ ಏರಿಕೆಯಾಗುತ್ತಲಿದೆೆ. ಸದ್ಯ ವರ್ಷಕ್ಕೆ 290 ಲಕ್ಷ ಟನ್ ಸಕ್ಕರೆ ಬಳಕೆಯಾಗುತ್ತಿದೆ. 2021-22ರ ವೇಳೆಗೆ 325 ಲಕ್ಷ ಟನ್ಗಳಿಗೆ ತಲುಪಲಿದೆ ಎಂದು ವರದಿ ತಿಳಿಸಿದೆ.
ಬದಲಾಗುತ್ತಿರುವ ಆಹಾರ ಪದ್ಧತಿ, ಆಹಾರ ಸಂಸ್ಕರಣಾ ವಲಯದಲ್ಲಿ ವಿಪರೀತ ಸಿಹಿ ಬಳಕೆಯಿಂದಾಗಿ ದೇಶದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕೃಷಿ ಪ್ರದೇಶದಲ್ಲಿ ಕಬ್ಬು ಬೆಳೆಯಬೇಕಿದೆ. ಜತೆಗೆ, ಅಧಿಕ ಇಳುವರಿಯ ಕಬ್ಬು ಬೆಳೆಯುವ ಮೂಲಕ ಸಕ್ಕರೆ ಉತ್ಪಾದನೆಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ