ಬೆಂಗಳೂರು
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಸಭೆ ಚಳಿಗಾಲದ ಅಧಿವೇಶನ ಆರಂಭವಾಗಿರುವ ಹೊತ್ತಿನಲ್ಲೇ, ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆ ಮತ್ತೆ ಭುಗಿಲೇಳುವ ಸಾಧ್ಯತೆ ಗೋಚರಿಸಿದೆ. ಬೆಳಗಾವಿ ವಿಚಾರವಾಗಿ ಶಿವಸೇನಾ (ಠಾಕ್ರೆ ಬಣ) ನಾಯಕ, ಸಂಸದ ಸಂಜಯ್ ರಾವುತ್ ಮಾತನಾಡಿದ್ದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಸಚಿವರಾಗಿದ್ದಾಗ ಮತ್ತು ಚಂದ್ರಕಾಂತ ಪಾಟೀಲ ಅವರು ಸಚಿವರಾಗಿದ್ದಾಗ ಗಡಿ ಭಾಗದ ವಿಶೇಷ ಉಸ್ತುವಾರಿಯನ್ನು ಹೊಂದಿದ್ದರು. ಆದರೆ ಏಕನಾಥ ಶಿಂಧೆ ಬೆಳಗಾವಿಗೆ ಹೋಗಲೇ ಇಲ್ಲ. ಆದರೆ, ನಾನು ಅಲ್ಲಿಗೆ ಹೋಗಿದ್ದೆ. ಅಲ್ಲಿ ನನ್ನನ್ನು ಬಂಧಿಸಲಾಯಿತು. ನಮ್ಮ ಸರ್ಕಾರದ ಅವಧಿಯಲ್ಲಿ ಆಗಾಗ ಅಲ್ಲಿಗೆ ಹೋಗುತ್ತಿದ್ದೆ. ನಂತರ ನನ್ನನ್ನು ಬಂಧಿಸಿ ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಯಿತು. ಆದರೆ ನಾನು ಹೆದರಲಿಲ್ಲ ಎಂದು ರಾವುತ್ ಹೇಳಿದ್ದಾರೆ.
ಬೆಳಗಾವಿ ಗಡಿ ಪ್ರದೇಶಕ್ಕೆ ಹೋದರೆ ಪೊಲೀಸರು ಬಂಧಿಸುತ್ತಾರೆ. ಅಷ್ಟೇ ಅಲ್ಲದೆ, ಪೊಲೀಸರ ಲಾಠಿ ಏಟು ತಿನ್ನಬೇಕಾಗುತ್ತದೆ. ಹಾಗಾಗಿ ಅವರು ಅಲ್ಲಿಗೆ ಹೋಗಲಿಲ್ಲ. ಬಂಧನ ಭೀತಿಯಿಂದ ಅಲ್ಲಿಗೆ ಹೋಗಿಲ್ಲ ಎಂದು ಶಿಂಧೆ ವಿರುದ್ಧ ಸಂಜಯ್ ರಾವುತ್ ವಾಗ್ದಾಳಿ ನಡೆಸಿದ್ದಾರೆ.