ಬೆಂಗಳೂರು
ವೃಕ್ಷಮಾತೆ ಎಂದು ಅಂತಾರಾಷ್ಟ್ರೀಯವಾಗಿ ಪ್ರಶಂಸೆ ಪಡೆದಿದ್ದ ಸಾಲುಮರದ ತಿಮ್ಮಕ್ಕ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆಯಲಾಗಿದ್ದು, ಇಂದು ಬೆಂಗಳೂರಿನ ಜ್ಞಾನಭಾರತಿ ಬಳಿ ಕಲಾಗ್ರಾಮದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಯಾವುದೇ ಸರ್ಕಾರಿ ರಜೆ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ನಿನ್ನೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಶತಾಯುಷಿ ಸಾಲುಮರದ ತಿಮ್ಮಕ್ಕ ಅವರ ಅಂತಿಮ ದರ್ಶನಕ್ಕೆ ಹುಲಿಕಲ್ ಮತ್ತು ಬೇಲೂರಿನಲ್ಲಿ ನಿನ್ನೆ ವ್ಯವಸ್ಥೆ ಮಾಡಲಾಗಿತ್ತು. ಅಂತ್ಯಕ್ರಿಯೆಗೆ ಎರಡು-ಮೂರು ಸ್ಥಳಗಳನ್ನು ಗೊತ್ತು ಮಾಡಲಾಗಿತ್ತು. ಆದರೆ ಯಾವುದೂ ನಿಗದಿಯಾಗಿರಲಿಲ್ಲ. ಇದೀಗ ಇಂದು ಮಧ್ಯಾಹ್ನ 12 ಗಂಟೆಗೆ ಜ್ಞಾನಭಾರತಿ ಬಳಿಯ ಕಲಾ ಗ್ರಾಮದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಆ ಮೂಲಕ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂಬ ವದಂತಿಗೆ ತೆರೆ ಎಳೆಯಲಾಗಿದೆ.
ಸಾಲುಮರದ ತಿಮ್ಮಕ್ಕ ಅವರ ನಿಧನ ಹಿನ್ನೆಲೆ ನಾಳೆ ಶಾಲಾ-ಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ ಎಂಬ ಆದೇಶ ಪತ್ರವೊಂದು ವೈರಲ್ ಆಗಿತ್ತು. ಆದರೆ ಅದು ನಕಲಿ ಆದೇಶ ಪತ್ರ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸರ್ಕಾರ ಆದೇಶಿಸಿದೆಯೇ ಹೊರತು ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಲಾಗಿದೆ ಎಂಬುದು ಸುಳ್ಳು ಎಂದು ಸರ್ಕಾರ ತಿಳಿಸಿದೆ.
ಅನಕ್ಷರಸ್ಥೆಯಾಗಿದ್ದ ತಿಮ್ಮಕ್ಕನವರು ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಅಪ್ರತಿಮ ಪರಿಸರವಾದಿ. ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದ್ದರ ಹಿನ್ನೆಲೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳೂ ಅವರು ಭಾಜನರಾಗಿದ್ದರು.








