ರಾಮನಗರ
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಗಟ್ಟುವುದಕ್ಕಾಗಿ ಸಂಚಾರ ಪೊಲೀಸರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ವೇಗದ ಮಿತಿಯನ್ನೂ ನಿಗದಿಪಡಿಸಿದೆ. ಇಷ್ಟೆಲ್ಲ ಆದಮೇಲೂ ಸಂಚಾರ ನಿಯಮಗಳ ಉಲ್ಲಘನೆಯಾಗುತ್ತಿರುವುದನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಲು ಸಂಚಾರ ಪೊಲೀಸರು ಆರಂಭಿಸಿದ್ದಾರೆ. ಹೆದ್ದಾರಿಯುದ್ದಕ್ಕೂ ಅತ್ಯಾಧುನಿಕ ಕ್ಯಾಮರಾಗಳು, ಸೆನ್ಸರ್ಗಳನ್ನು ಅಳವಡಿಸಲಾಗಿದೆ. ಆದಾಗ್ಯೂ, ಕಳೆದ ಕೆಲವೇ ವಾರಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವಾಹನ ಸವಾರರು ನಿಯಮ ಉಲ್ಲಂಘಿಸಿದ್ದಾರೆ ಎಂದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಗಂಟೆಗೆ 130 ಕಿಲೋಮೀಟರ್ಗಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಅಂಥವರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ. ವಾಹನ ಸೀಜ್ ಮಾಡಿ, ಲೈಸೆನ್ಸ್ ಕೂಡ ಅಮಾನತಿನಲ್ಲಿಡಲಾಗುತ್ತದೆ ಎಂದು ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಪಘಾತ ತಡೆಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಈವರೆಗೆ 193 ವಾಹನ ಮಾಲಿಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ಎರಡು ಲಕ್ಷಕ್ಕೂ ಅಧಿಕ ವಾಹನ ಸವಾರರು ನಿಯಮ ಮೀರಿದ್ದಾರೆ. ಐಟಿಎಮ್ಎಸ್ ಕ್ಯಾಮರಾದಿಂದ ವಾಹನಗಳ ಮೇಲೆ ನಿಗಾ ಇಡಲಾಗುತ್ತಿದೆ. 9 ರೀತಿಯ ನಿಮಯಗಳು ಇದರಲ್ಲಿ ಡಿಟೆಕ್ಟ್ ಆಗುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.