ತುಮಕೂರು:
ಬೆಂಗಳೂರಿನಲ್ಲಿ ಕ್ಯಾಬಿನೆಟ್ ಮೀಟಿಂಗ್ ಇದೆ ಎಂದು ಎದ್ದುಬಂದೆ, ಬಸವರಾಜ್ ಏನು ಎಂದು ಎಂಎಲ್ಸಿ ಎಲೆಕ್ಷನ್ ನಲ್ಲಿ ತೋರಿಸಿದ್ದಾರೆ: ಸಚಿವ ಮಾಧುಸ್ವಾಮಿ
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡಲು ಸ್ವತಂತ್ರವಿದೆ, ಅವರು ಮಾತನಾಡಿಕೊಳ್ಳಲಿ ಬಿಡಿ, ಯಾರೋ ಹುಚ್ಚುಚ್ಚಾಗಿ ಮಾತನಾಡಿದರೆ ಅದರಲ್ಲಿ ಸತ್ಯಾಂಶವಿದೆ, ಸುಳ್ಳು ಇದೆ ಎಂದು ನಾನು ಪ್ರತಿಕ್ರಿಯೆ ನೀಡಲು ಆಗುವುದಿಲ್ಲ,
ಅಷ್ಟಕ್ಕೂ ಸಂಸದ ಬಸವರಾಜ್ ನಮ್ಮವರಲ್ಲ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಸಂಸದ ಜಿ.ಎಸ್ ಬಸವರಾಜ್ ಹಾಗೂ ಸಚಿವ ಬೈರತಿ ಬಸವರಾಜ್ ಅವರು ಸಚಿವ ಮಾಧುಸ್ವಾಮಿ ಗುಸು, ಗುಸು ಎಂದು ಮಾತನಾಡಿಕೊಂಡಿದ್ದರು.
ಈ ವೇಳೆ ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜು ಆರೋಪಗಳ ಸುರಿಮಳೆಯೇ ಹರಿಸಿದ್ದರು. ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದ್ದಾನಲ್ಲ ಅವನ ತರ ಮಾಧುಸ್ವಾಮಿ ಆಡುತ್ತಿದ್ದಾನೆ.
ಇದರಿಂದಾಗಿ ನಮ್ಮ ಜಿಲ್ಲೆಯನ್ನೇ ಹಾಳು ಮಾಡಿಬಿಟ್ಟಿದ್ದಾನೆ ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಜಿ.ಎಸ್ ಬಸವರಾಜ್ ಇಂದು ಹರಿಹಾಯ್ದಿದ್ದರು.
ಈ ಬಗ್ಗೆ ಸಚಿವ ಮಾಧುಸ್ವಾಮಿಯಲ್ಲಿ ಪ್ರತಿಕ್ರಿಯೆ ಕೇಳಿದಾಗ, ನಾನು ಆ ಸುದ್ದಿಗೋಷ್ಠಿಗೆ ಹೋಗಿದ್ದೆ. ಆದರೆ 12 ಗಂಟೆಗೆ ಕ್ಯಾಬಿನೆಟ್ ಇರುವುದರಿಂದ ಸಮಯವಾಗುತ್ತದೆ. 9.30ಗೆ ಹೊರಡಬೇಕು ಎಂದು ಮೊದಲೇ ಹೇಳಿದ್ದೆ.
ಆದರೂ ಕಾರ್ಯಕ್ರಮದ ನಿರ್ವಾಹಕರು 10 ಗಂಟೆಯಾದರೂ ಸಭೆ ಮುಗಿಸುವ ಲಕ್ಷಣ ಕಾಣಲಿಲ್ಲ, ಇದರಿಂದಾಗಿ ನಾನು ಅಲ್ಲಿಂದ ಎದ್ದು ಬಂದಿದ್ದೇನೆ ಹೊರತು ಬೇರೆ ಕಾರಣವಿಲ್ಲ. ನನಗೆ ಬೇರೆಯವರ ವಿಚಾರ ತಿಳಿದಿಲ್ಲ ಎಂದರು.
ಎಲ್ಲರಿಗೂ ತಿಳಿದಂತೆ ರೋಡ್ ಬ್ಲಾಕ್ ಆಗಿರುವುದರಿಂದ ಕ್ಯಾಬಿನೆಟ್ ಮೀಟಿಂಗ್‌ಗೆ ತಡವಾಗುತ್ತದೆ ಎಂದು ಮುಂಚೆನೇ ತಿಳಿಸಿದ್ದೆ. 12 ಗಂಟೆಗೆ ಕ್ಯಾಬಿನೆಟ್ ಇದ್ದರೂ ಅರ್ಧ ಗಂಟೆ ಮುಂಚೆ ಅಲ್ಲಿ ಹೋಗಿರಬೇಕು.
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ಸಿಎಂ ಜೊತೆ ಮಾತನಾಡಬೇಕಿತ್ತು ಎಂದ ಅವರು, ಸಭೆಯಲ್ಲಿರುವಾಗಲೇ 2 ಬಾರಿ ಮುಖ್ಯಮಂತ್ರಿ ಅವರು ಕರೆ ಮಾಡಿದ್ದರು. ಆದ್ದರಿಂದ ಅರ್ಧಕ್ಕೆ ಎದ್ದು ಬಂದೆ. ಕ್ಯಾಬಿನೆಟ್ ಮೀಟಿಂಗ್ ಗೆ ನಾನು ತಡವಾಗಿ ಹೋದರೆ ಹೇಗೆ ಎಂದು ಕೇಳಿದರು.
ನಿಮ್ಮ ಪಕ್ಷದ ನಾಯಕರೇ ನಿಮ್ಮ ವಿರುದ್ಧ ಮಾತನಾಡಿದ್ದರಲ್ಲವೇ ಎಂದು ಕೇಳಿದಾಗ, ಅವರು ಯಾವಾಗ ನಮ್ಮವರಾಗಲು ಸಾಧ್ಯ ಹೇಳಿ, ವಿಧಾನ ಪರಿಷತ್ ಚುನಾವಣೆಯಲ್ಲಿಯೇ ಸಾಬೀತುಪಡಿಸಿದ್ದಾರಲ್ಲವೇ.
ನಾನು ಶಿಸ್ತು ಮನುಷ್ಯ, ನಾನು ಕ್ಯಾಬಿನೆಟ್ ಮೀಟಿಂಗ್ ಗೆ ಹೋಗುತ್ತೇನೆ ಎಂದು ಹೇಳಿ ಬಂದಿದ್ದೇನೆ, ಅದರಿಂದಾಚೆಗೆ ನನಗೇನು ಗೊತ್ತಿಲ್ಲ ಎಂದರು.
ಸಂಸದ ಬಸವರಾಜ್ ಮತ್ತು ಸಚಿವ ಭೈರತಿ ಏಕೆ ಮಾತನಾಡಿದ್ದಾರೆ, ಏನು ಮಾತನಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ, ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ