ಬೆಂಗಳೂರು:
ಪತಿಯೊಬ್ಬ ತನ್ನ ಪತ್ನಿಯನ್ನು ಜಾಲಿ ರೈಡ್ಗೆ ಕರೆದುಕೊಂಡು ಕಾರಿನಿಂದ ಗುದ್ದಿ ಪತ್ನಿಯನ್ನು ಕೊಲೆ ಮಾಡಿ ಅಪಘಾತದಿಂದ ಸಾವು ಸಂಭವಿಸಿದೆ ಎಂಬ ಕತೆ ಕಟ್ಟಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ಘಟನೆ ನವೆಂಬರ್ 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತೇಜ್ ಸಿಂಗ್ ಕೊಲೆ ಮಾಡಿದ ಆರೋಪಿ. ಈತ ಪತ್ನಿ ದೀಪಲ್ ಕಂವಾರ್ಳನ್ನು ಹತ್ಯೆ ಮಾಡಿದ್ದಾನೆ. ಇಬ್ಬರೂ ಮೂಲತಃ ರಾಜಸ್ಥಾನದವರು. ಈ ದಂಪತಿ ಹುಣಿಸೇಮಾರನಹಳ್ಳಿ ಬಳಿಯ ಜನತಾ ಕಾಲೋನಿಯಲ್ಲಿ ವಾಸವಿದ್ದರು. ದಂಪತಿ ಚಿಕ್ಕ ಚಿನ್ನದ ಮಳಿಗೆ ಹೊಂದಿದ್ದರು. ಇಬ್ಬರ ನಡುವೆ ನಿತ್ಯ ಮನಸ್ತಾಪ ನಡೆಯುತ್ತಿತ್ತು. ಇದರಿಂದ ರೋಸಿ ಹೋದ ತೇಜ್ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.
ಹೀಗೆ ಸಂಚು ರೂಪಿಸಿದವ ನ.16ರಂದು ಸ್ನೇಹಿತನ ಹೆಸರಲ್ಲಿ ಕಾರು ಬುಕ್ ಮಾಡಿ ಪತ್ನಿ ಮತ್ತು ಸ್ನೇಹಿತರನ್ನು ಡಿನ್ನರ್ ಪಾರ್ಟಿಗೆ ಕರೆದುಕೊಂಡು ಹೋಗಿದ್ದನು. ಆಗ ಈತ ಹೆಂಡತಿಗೂ ಮದ್ಯ ಕುಡಿಸಿದ್ದ ಎನ್ನಲಾಗಿದೆ. ಡಿನ್ನರ್ ನಂತರ ಸ್ನೇಹಿತರನ್ನು ಮನೆಗೆ ಬಿಟ್ಟು, ಮಧ್ಯರಾತ್ರಿ ಪತ್ನಿಯನ್ನು ನಂದಿ ಬೆಟ್ಟದ ರಸ್ತೆಗೆ ಕರೆದೊಯ್ದಿದ್ದ.
ಹೆಂಡತಿಯನ್ನು ಕೊಲ್ಲಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದ ತೇಜ್, ಕಾರು ಬಾಗಿಲು ತೆಗೆದು ಹೆಂಡತಿಯನ್ನು ಕೆಳಗೆ ತಳ್ಳಿದ್ದ, ಅಷ್ಟೇ ಅಲ್ಲ, ನಾಲ್ಕೈದು ಬಾರಿ ಆಕೆಯ ಮೇಲೆ ಕಾರು ಹತ್ತಿಸಿದ್ದ. ನಂತರ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.
ದೂರು ದಾಖಲಿಸಿಕೊಂಡ ಪೊಲೀಸರು ಕಾರಿನ ಜಿಪಿಎಸ್ ಪರಿಶೀಲಿಸಿದಾಗ ಅಪಘಾತ ಸ್ಥಳದಲ್ಲಿ ಹಿಂದೆ ಮುಂದೆ ಚಲಿಸುವ ಮಾಹಿತಿ ದೊರೆಯಿತು. ಬಳಿಕ ಪೊಲೀಸರು ತೇಜ್ ಸಿಂಗ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸರು ಆರೋಪಿ ತೇಜ್ ಸಿಂಗ್ನನ್ನು ಬಂಧಿಸಿದ್ದಾರೆ.