ಮುಡಾ ಕೇಸ್​​ ವಿಚಾರಣೆ ಡಿಸೆಂಬರ್‌ 23ಕ್ಕೆ ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ಬೆಂಗಳೂರು

    ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ನಡೆದ ಮುಡಾ ಹಗರಣ ಪ್ರಕರಣದ ವಿಚಾರಣೆ ಮುಂದೂಡಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ  ಅವರ ಪತ್ನಿ ವಿರುದ್ಧದ ಮುಡಾ ಸೈಟ್ ಹಂಚಿಕೆ ಕೇಸ್‌ನ ವಿಚಾರಣೆ ಇದಾಗಿದೆ. ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್‌ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಡಿಸೆಂಬರ್‌ 23ಕ್ಕೆ ಮುಂದೂಡಿದೆ. ಇದೇ ವೇಳೆ ತನಿಖೆಯ ವರದಿಯನ್ನು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದು, ಅಂತಿಮ ಹಂತದಲ್ಲಿದೆ ಎಂದು ಲೋಕಾಯುಕ್ತ ಎಸ್‌ಪಿಪಿ ವೆಂಕಟೇಶ ಅರಬಟ್ಟಿ ತಿಳಿಸಿದರು.

    ಕೋರ್ಟ್ ಆದೇಶಿಸಿದ ಮೇಲೂ ಸಿದ್ದರಾಮಯ್ಯ ಸೇರಿ 4 ಆರೋಪಿಗಳ ವಿರುದ್ಧ ತನಿಖೆ ಮಾಡಿಲ್ಲ. ಇವರು ಕಾನೂನಿಗೆ ಬೆಲೆ ಕೊಡುತ್ತಿಲ್ಲವೆಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಹೀಗಾಗಿ ನ್ಯಾಯಾಲಯ ತಮ್ಮ ಅರ್ಜಿಯ ಮೇಲೆ ಆದೇಶ ನೀಡಬೇಕೆಂದು ವಾದಿಸಲಾಗಿದೆ. 

   ಇದಕ್ಕೆ ಪ್ರತಿಯಾಗಿ ಎಸ್‌ಪಿಪಿ ವಾದ ಮಂಡಿಸಿ, ”3 ಜಿಲ್ಲೆಗಳ ಸಿಬ್ಬಂದಿಯೊಂದಿಗೆ ಲೋಕಾಯುಕ್ತ ಪೊಲೀಸರು ಕೆಲಸ ಮಾಡಿದ್ದಾರೆ. ಕೇಸ್ ಡೈರಿ ತಾವು ಪರಿಶೀಲಿಸಿದರೆ ತನಿಖೆ ನಡೆಸಿರುವುದು ತಿಳಿಯುತ್ತದೆ. ತನಿಖಾ ಸ್ಥಿತಿಗತಿ ವರದಿಯನ್ನು ದೂರುದಾರರಿಗೆ ನೀಡುತ್ತೇವೆ. ಅವರು ಅದನ್ನು ಬಹಿರಂಗಪಡಿಸದಂತೆ ನ್ಯಾಯಾಲಯ ನಿರ್ಬಂಧಿಸಬೇಕುʼʼ ಎಂದು ಈ ವೇಳೆ ಎಸ್​​ಪಿಪಿ ತಿಳಿಸಿದರು.

   ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಬಿ ರಿಪೋರ್ಟ್ ಸಂಬಂಧಿಸಿದಂತೆ ಹೆಚ್ಚುವರಿ ವಾದ ಮಂಡನೆಯಿದ್ದರೆ ಸಲ್ಲಿಸಿ ಎಂದು ಇಡಿ, ದೂರುದಾರ ಸ್ನೇಹಮಯಿ ಕೃಷ್ಣಗೆ ಸೂಚನೆ ನೀಡಿತು. ಜತೆಗೆ ವಿಚಾರಣೆಯನ್ನು ಡಿಸೆಂಬರ್‌ 23ಕ್ಕೆ ಮುಂದೂಡಿತು. 

   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮೂಡಾದಿಂದ ಪಡೆದಿದ್ದ 14 ಸೈಟ್‌ಗಳ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಬಿ ರಿಪೋರ್ಟ್‌ ಸಲ್ಲಿಸಿತ್ತು. ಬಿ-ರಿಪೋರ್ಟ್‌ನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಖುದ್ದು ನ್ಯಾಯಾಲಯದಲ್ಲಿ ಸ್ನೇಹಮಯಿ ಕೃಷ್ಣ ವಾದಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮ ವರದಿ ಸಲ್ಲಿಸಲು 2 ತಿಂಗಳು ಗಡುವು ನೀಡಿ ತೀರ್ಪನ್ನು ಕಾಯ್ದಿರಿಸಿತ್ತು. ಇದಕ್ಕೂ ಮುನ್ನ ಲೋಕಾಯುಕ್ತ ಸಲ್ಲಿಸಿದ್ದ ಬಿ-ರಿಪೋರ್ಟ್ ಪ್ರಶ್ನಿಸಿ ಇಡಿ ಸಹ ತಕರಾರು ಅರ್ಜಿ ಸಲ್ಲಿಸಿತ್ತು. 

   ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. 50-50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದ್ದು ಅಂದಾಜು 5 ಸಾವಿರ ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು. ವಿವಾದಕ್ಕೆ ಕಾರಣವಾದ ಸೈಟ್‌ಗಳನ್ನು ಪಾರ್ವತಿ 2024ರ ಅಕ್ಟೋಬರ್ 1ರಂದು ಹಿಂದಿರುಗಿಸಿದ್ದರು.

   ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಫೆಬ್ರವರಿ 20ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸ್ ಟಿ.ಉದೇಶ ಅವರು ದಾಖಲೆಗಳೂ ಸೇರಿದಂತೆ ಒಟ್ಟು 11 ಸಾವಿರ ಪುಟಗಳ ತನಿಖೆಯ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಈ ವರದಿಯಲ್ಲಿ, ತನಿಖೆಯಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಲೋಕಾಯುಕ್ತ ಪೊಲೀಸರೂ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು.

Recent Articles

spot_img

Related Stories

Share via
Copy link