ಚಿಕ್ಕಮಗಳೂರು
ಬೆಳ್ಳಿ ಹಬ್ಬದ ಸಂಭ್ರಮದ ಹೊಸ್ತಿಲಲ್ಲಿರೋ ಚಿಕ್ಕಮಗಳೂರಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ, ಆನೆ ಸೇರಿದಂತೆ ಕಾಡು ಪ್ರಾಣಿಗಳ ಸಂತತಿ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಪ್ರಾಣಿ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
ಭದ್ರಾ ಹುಲಿ ಸಂರಕ್ಷಿತಕ್ಕೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ. ಅಭಯಾರಣ್ಯ ಬೆಟ್ಟಗಳಿಂದ ಮತ್ತು ಕಡಿದಾದ ಇಳಿಜಾರಿನಿಂದ ಸುತ್ತುವರೆದಿದ್ದು ಮುಳ್ಳಯ್ಯನಗಿರಿ, ಹೆಬ್ಬೆಗಿರಿ, ಗಂಗೆಗಿರಿ ಮತ್ತು ಬಾಬಾಬುಡನ್ ಗಿರಿ ಬೆಟ್ಟ ಶ್ರೇಣಿಗಳ ಅಪರೂಪದ ನೋಟವಿದ್ದು, ಒಟ್ಟು 499 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಸಾವಿರಾರು ಪ್ರಾಣಿಗಳಿಗೆ ಆಶ್ರಯ ನೀಡಿದೆ.
ಈ ಪ್ರದೇಶಕ್ಕೆ 1974ರಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲಾಯಿತು. ಭದ್ರ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಿ 50 ವರ್ಷಗಳಾಗಿವೆ. ನಂತರ, ಇದೇ ಭದ್ರಾ ವನ್ಯಜೀವಿ ಅಭಯಾರಣ್ಯಕ್ಕೆ 1998ರ ಡಿಸೆಂಬರ್ 23ರಂದು ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಅರಣ್ಯ ಸಂಪತ್ತು ಮತ್ತು ಕಾಡುಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.
ಭದ್ರಾ ವನ್ಯಜೀವಿ ವಿಭಾಗದಲ್ಲಿ 25 ವರ್ಷಗಳ ಹಿಂದೆ ಹುಲಿಗಳ ಸಂಖ್ಯೆ ಎಂಟು ಇತ್ತು. ಕಳೆದ ವರ್ಷ ನಡೆಸಿದ ಗಣತಿಯಲ್ಲಿ ಹುಲಿಗಳ ಸಂಖ್ಯೆ 35 ದಾಟಿದ್ದರೇ, ಆನೆಗಳ ಸಂಖ್ಯೆ 447, ಚಿರತೆಗಳು 119, ಅಲ್ಲದೇ ಕೇವಲ 3-4 ಮಾತ್ರ ಇದ್ದ ಕಾಟಿಗಳ ಸಂಖ್ಯೆ ಈಗ ಜಾಸ್ತಿಯಾಗಿದೆ. ಅಭಯಾರಣ್ಯದ ಯಾವುದೇ ಪ್ರದೇಶಕ್ಕೆ ಹೋದರು ಕೂಡ ಎಲ್ಲ ವಯಸ್ಸಿನ ಕಾಟಿಗಳು ಕಾಣ ಸಿಗುತ್ತವೆ.
ಅಭಯಾರಣ್ಯ ಸುತ್ತ ಇದ್ದ ಊರುಗಳನ್ನು ಸ್ಥಳಾಂತರ ಮಾಡಿದ ನಂತರ ಗದ್ದೆಗಳು ಹುಲ್ಲುಗಾವಲಾಗಿ ಇಲ್ಲಿನ ಸಸ್ಯಹಾರಿ ಪ್ರಾಣಿಗಳಿಗೆ ಮೇವು ಒದಗಿದೆ. ಮಳೆಗಾಲದಲ್ಲಿ ನೀರು ಹೀರಿಕೊಳ್ಳುವ ಶೋಲಾ ಕಾಡುಗಳು ಬೇಸಿಗೆಯಲ್ಲಿ ನೀರು ಹರಿಸುವ ಮೂಲಕ ವರ್ಷವಿಡೀ ನೀರಿನ ಹರಿವು ಇರುವಂತೆ ನೋಡಿಕೊಳ್ತಿವೆ. ಇದರಿಂದಾಗಿ ಸೋಮವಾಹಿನಿ ನದಿ ವರ್ಷವಿಡೀ ಹರಿಯುತ್ತಿದ್ದು. ಕಳೆದ ವರ್ಷ ತೀವ್ರ ಬರಗಾಲವಿದ್ದರೂ ವನ್ಯ ಜೀವಿಗಳಿಗೆ ನೀರಿನ ತೊಂದರೆ ತಲೆದೋರಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಒಟ್ಟಾರೆಯಾಗಿ ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ, ಆನೆ, ಕಾಟಿ ಸೇರಿದಂತೆ ಇತರೆ ಕಾಡುಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು ಸಂಭ್ರಮಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ವನ್ಯ ಜೀವಿ ಸಂಪತ್ತು ಮತ್ತಷ್ಟು ಹೆಚ್ಚಾಗಬೇಕು. ಇದರ ಜೊತೆಗೆ ಕಾಡು ಪ್ರಾಣಿಗಳು ನಾಡಿನತ್ತ ಬಾರದಂತೆ ನೋಡಿಕೊಳ್ಳಿ ಎಂದು ಅರಣ್ಯ ಇಲಾಖೆಗೆ ಪರಿಸರ ಪ್ರೇಮಿಗಳು ಕಿವಿಮಾತು ಹೇಳಿದ್ದಾರೆ.