ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ಬರಗಾಲ ಪೀಡಿತ ಪ್ರದೇಶವಾದ ಚಳ್ಳಕೆರೆ ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ರೈತ ಸಮುದಾಯಕ್ಕೆ ಸಮೃದ್ಧ ನೀರು ಕೊಡುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಜಾರಿ ಕುರಿತು ಜನರಲ್ಲಿ ಹಾಗೂ ರೈತರಲ್ಲಿ ಮೂಡಿದ್ದ ಆತಂಕವನ್ನು ದೂರ ಮಾಡಲು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಲೋಕಸಭಾ ಸದಸ್ಯಬಿ.ಎನ್.ಚಂದ್ರಪ್ಪ ನೇತೃತ್ವದಲ್ಲಿ 500ಕ್ಕೂ ಹೆಚ್ಚು ರೈತರ ತಂಡ ಹಾಗೂ ಸಾರ್ವಜನಿಕರ ಸಂಘ ಸಂಸ್ಥೆ ಪ್ರತಿನಿಧಿಗಳುಗುರುವಾರ ಕಾಮಗಾರಿ ಪರಿಶೀಲನೆಗೆ ತೆರಳಿದ್ದು, ಪ್ರಸ್ತುತ ರಾಜ್ಯ ಸರ್ಕಾರ ಕೈಗೊಂಡಿರುವ ಕಾಮಗಾರಿ ಪ್ರಗತಿಯ ಬಗ್ಗೆ ರೈತರು ಹಾಗೂ ಸಾರ್ವಜನಿಕರು ತೃಪ್ತಿ ವ್ಯಕ್ತ ಪಡಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ಸೂಪರ್‍ಡೆಂಡ್ ಇಂಜಿನಿಯರ್ ಪಾಲೇಕರ್ ಮಾಹಿತಿ ನೀಡಿ, ಕಳೆದ 2015ರಲ್ಲಿ ರಾಜ್ಯ ಸರ್ಕಾರ 12340 ಕೋಟಿ ವೆಚ್ಚದ ಈ ಯೋಜನೆಗೆ 6ಮಾರ್ಚ್ 2015ರಂದು ಅನುಮೋದನೆ ನೀಡಿರುತ್ತದೆ. ಚಳ್ಳಕೆರೆ ತಾಲ್ಲೂಕಿನ 13266 ಎಕರೆ ಪ್ರದೇಶಕ್ಕೆ ನೀರಾªರಿ ಸೌಲಭ್ಯ ಹಾಗೂ 51 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದ್ದು 2018 ಆಗಸ್ಟ್ ಅಂತ್ಯಕ್ಕೆ 2483 ಕೋಟಿ ಹಣ ವೆಚ್ಚ ಮಾಡಿದ್ದು, ಇನ್ನೂ ಈ ಯೋಜನೆ ಜಾರಿಗೆ ಹಣದ ಅವಶ್ಯಕತೆ ಇದ್ದು, ಹಂತ ಹಂತವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಯೋಜಿಸಿದ್ದು, ತಾಲ್ಲೂಕಿನ ರೈತರಿಗೆ ಡಿಸೆಂಬರ್ 2018ರೊಳಗೆ ನೀರು ಒದಗಿಸುವ ಉದ್ದೇಶವನ್ನು ಮಾಡಲಾಗಿದೆ ಎಂದರು.
ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ ಚಳ್ಳಕೆರೆತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯದ ಜೊತೆಗೆ ಕೆರೆಗಳನ್ನು ತುಂಬಿಸುವ ಯೋಜನೆ ಮಾಡಲಾಗಿದೆ. ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಮಾತ್ರ 20ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ ಎಂದರು. ಭದ್ರಾ ಮೇಲ್ದಂಡೆ ಯೋಜನೆ ಬಿ ಸ್ಕೀಂ ಅಡಿಯಲ್ಲಿ 19 ಟಿಎಂಸಿ ನೀರನ್ನ ಬಳಸಿ ತುಮಕೂರು, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ 86 ಸಾವಿರ ಹೇಕ್ಟರ್ ಪ್ರದೇಶಕ್ಕೆ ನೀರು ಒದಗಿಸುವ ಯೋಜನೆ ಇದಾಗಿದ್ದು, ರಾಜ್ಯ ಸರ್ಕಾರ ಈಗಾಗಲೇ ನಿರೀಕ್ಷೆಯಂತೆ 2500 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಯೋಜನೆ ಪೂರ್ಣಗೊಳ್ಳಲು ಅವಶ್ಯವಿರುವ ಹಣವನ್ನು ಬಿಡುಗಡೆ ಮಾಡುವಂತೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಒತ್ತಾಯ ಪಡಿಸಲಾಗುವುದು.
ಶೀಘ್ರದಲ್ಲೇ ಜಿಲ್ಲೆಯ ಶಾಸಕರ ತಂಡ,ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‍ರವರನ್ನು ಭೇಟಿ ಮಾಡಿ ಸರ್ಕಾರವನ್ನು ಒತ್ತಾಯಿಸಿ ಹಣ ಬಿಡುಗಡೆಗೊಳಿಸಲಾಗುವುದು ಎಂದರು. ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕಳೆದ 2015ರಲ್ಲಿ ಈ ಯೋಜನೆ ಕಾಮಗಾರಿ ಪ್ರಾರಂಭವಾಗಿ ಪ್ರಸ್ತುತ ಜಿಲ್ಲೆಯ ಪಕ್ಕದ ತಾಲ್ಲೂಕು ಕೇಂದ್ರವಾದ ಅಜ್ಜಂಪುರ ತನಕ ಚಾನಲ್ ಕಾವiಗಾರಿ ಪ್ರಗತಿಯಲ್ಲಿದೆ. ಪ್ರಾರಂಭದ ಹಂತದಲ್ಲಿ ಲಕವಳ್ಳಿಯಿಂದ 10 ಕಿ.ಮೀವರೆಗೆ ರಂಗೇನಹಳ್ಳಿಯ ಬಳಿ ಚಾನಲ್ ಮೂಲಕ ನೀರು ಹರಿದು ಅಲ್ಲಿ ದಾಸ್ತಾನಾಗುವ ನೀರನ್ನು 44.3 ಮೀಟರ್ ಎತ್ತರಕ್ಕೆ ಪಂಪ್ ಮಾಡಲಾಗುವುದು. ಅಲ್ಲಿಂದ ಬೆಟ್ಟದ ತಾವರೆಕೆರೆ ಬಳಿ ಇರುವ ಮತ್ತೊಂದು ನೀರಿನ ದಾಸ್ತಾನು ಇದ್ದು, ಅಲ್ಲಿಂದ ಸಹ ಪುನಃ 44.3 ಮೀಟರ್ ಎತ್ತರಕ್ಕೆ ನೀರು ಪಂಪ್ ಮಾಡುವ ವ್ಯವಸ್ಥೆ ಈಗಾಗಲೇ ಆಗಿದೆ. ಅಜ್ಜಂಪುರ ಬಳಿ 7039 ಮೀಟರ್ ಸುರಂಗ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದ್ದು ಇನ್ನೂ 2031 ಮೀಟರ್‍ಬಾಕಿ ಇದ್ದು, ಈ ತಿಂಗಳ ಅಂತ್ಯದೊಳಗೆ ಈ ಕಾಮಗಾರಿಯನ್ನು ಪೂರೈಸಲಾಗುವುದು ಎಂದು ತಿಳಿಸಿದ್ಧಾರೆ.
ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದ ಕೆಲ ರೈತ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭದ್ರಾ ಮೇಲ್ದಂಡೆ ಕಾಮಗಾರಿಯ ಪ್ರಗತಿಯ ಬಗ್ಗೆ ಊಹಾಪೋಹ ಮಾತುಗಳಿಂದ ಸರ್ಕಾರ ಮೇಲೆ ಅನುಮಾನ ಮೂಡುವಂತಹ ಮಾತುಗಳನ್ನು ಆಡುತ್ತಿದ್ದು, ಪ್ರಸ್ತುತ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವೂ ಸಹ ರೈತರ ಹಿತದೃಷ್ಠಿಯಿಂದ ಈ ಯೋಜನೆ ಪೂರ್ಣಗೊಳಿಸಲು ಉತ್ಸಾಹ ತೋರಿದ್ದು, ಪ್ರಸ್ತುತ ಕಾಮಗಾರಿಯ ಪ್ರಗತಿಯಬಗ್ಗೆ ರೈತರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ವೀಕ್ಷಿಸಲಿ ಎಂಬ ಉದ್ದೇಶದಿಂದ ಎಲ್ಲರನ್ನೂ ಕರೆತಂದು ಸ್ವಷ್ಟ ಮಾಹಿತಿ ನೀಡಲಾಗಿದೆ ಎಂದರು.
ಅಖಂಡ ಕರ್ನಾಟಕ ರೈತ ಸಂಘದ ಗೌರವ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಶಾಸಕರೇ ಕಾಮಗಾರಿ ವೀಕ್ಷಿಸುವಂತೆ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ರೈತರು ಭೇಟಿ ನೀಡಿ ಕಾಮಗಾರಿಯ ಪ್ರಗತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದಾರೆ. ಆದರೆ, ಕಳೆದ 2017 ಮತ್ತು 2018ರ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಈ ಯೋಜನೆಗೆ ಹಣವನ್ನು ಬಿಡುಗಡೆ ಮಾಡದಿದ್ದು, ಈ ಯೋಜನೆ ಕುಂಠಿತಗೊಳ್ಳಲು ಕಾರಣವಾಗಿದೆ. ಪ್ರಸ್ತುತ ಸರ್ಕಾರ ಜಿಲ್ಲೆಯ ರೈತರ ಮೇಲೆ ಮತ್ತು ಅವರ ಸಂಕಷ್ಟಗಳ ಮೇಲೆ ಕರುಣೆ ಇದ್ದಲ್ಲಿ ಕೂಡಲೇ ಈ ಯೋಜನೆ ಜಾರಿಗೆ ಅವಶ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಕಳೆದ ವರ್ಷ ಹೊಸದುರ್ಗದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಗಮನ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ 17ಕ್ಕೆ ನೀರು ಕೊಡುವ ಭರವಸೆ ನೀಡಿದ್ದರು. ಆದರೆ, ಯೋಜನೆ ಕಾರ್ಯಗತವಾಗಲು ಹಣ ನೀಡದೆ ನಿರ್ಲಕ್ಷ್ಯೆ ತೋರಿದ್ದು, ರೈತ ಸಮುದಾಯಕ್ಕೆ ಅಸಮದಾನವನ್ನು ಉಂಟು ಮಾಡಿದೆ. 10 ವರ್ಷಗಳ ನಿರಂತರ ಬರಗಾಲ ಬಡ ರೈತರ ಪ್ರಾಣಕ್ಕೆ ಕುತ್ತು ತಂದಿದ್ದು, ಸರ್ಕಾರ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ಧಾರೆ.
ಹೊಸದುರ್ಗ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪಿ.ಪ್ರಕಾಶ್‍ಮೂರ್ತಿ, ಟಿ.ಮುತ್ತುರಾಜ್ , ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ಸದಸ್ಯರಾದ ರಂಜಿತ, ಎಚ್.ಆಂಜನೇಯ, ಜಿ.ವೀರೇಶ್, ನಗರಸಭಾ ಸದಸ್ಯರಾದ ಕೆ.ವೀರಭದ್ರಯ್ಯ, ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ, ಚಳ್ಳಕೇರಪ್ಪ, ಸುಮಾ, ಸಾವಿತ್ರಿ, ಕಾಂಗ್ರೆಸ್ ಮುಖಂಡರಾದ ಆರ್.ಪ್ರಸನ್ನಕುಮಾರ್, ನಾಗರಾಜು ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ