ಬಾಗಪ್ಪ ಹರಿಜನ ಕೊಲೆ ರಹಸ್ಯ ಬಯಲು….!

ವಿಜಯಪುರ

     ವಿಜಯಪುರ  ನಗರದ ಮದೀನಾ ನಗರದ ಬಾಡಿಗೆ ಮನೆಯಲ್ಲಿದ್ದ ಭೀಮಾತೀರದ ಹಂತಕ ಬಾಗಪ್ಪ ಹರಿಜನ  ಫೆಬ್ರವರಿ 11 ರ ರಾತ್ರಿ ಊಟ ಮಾಡಿ ಮನೆಯಿಂದ ವಾಕಿಂಗ್​ಗೆ ಹೋಗಿ ವಾಪಸ್ ಬರುತ್ತಿದ್ದನು. ಈ ವಿಚಾರವನ್ನು ತಿಳಿದ ನಾಲ್ವರು ಹಂತಕರು ಆಟೋ ಹಾಗೂ ಬೈಕ್​ನಲ್ಲಿ ಬಂದು ಬಾಗಪ್ಪ ಹರಿಜನ ಮೇಲೆ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡಿದ್ದರು. ಹಂತಕರು ಅಟ್ಯಾಕ್ ಮಾಡುತ್ತಿದ್ದಂತೆ ಮನೆಯೊಳಗೆ ಓಡಿ ಹೋಗಲು ಮುಂದಾಗಿದ್ದ ಬಾಗಪ್ಪನನ್ನು ಕೊಡಲಿ ಮತ್ತು ತಲ್ವಾರ್​​ನಿಂದ ಕೊಚ್ಚಿ ಹಾಕಲಾಗಿತ್ತು. ಎಡ ಮುಂಗೈ ಕಟ್ ಆಗಿ ಬಿದ್ದಿತ್ತು. ನಂತರ ಆತನ ಮೇಲೆ ಕಂಟ್ರಿ ಪಿಸ್ತೂಲ್​ನಿಂದ ಗುಂಡು ಹಾರಿಸಿ ಬಾಗಪ್ಪ ಮೃತಪಟ್ಟ ಎಂದು ದೃಢ ಪಡಿಸಿಕೊಂಡು ಪರಾರಿಯಾಗಿದ್ದರು.

   2024 ರ ಅಗಷ್ಟ 8 ರಂದು ವಕೀಲ ರವಿ ಮೇಲಿನಕೇರಿ ಕೊಲೆಯಾಗಿತ್ತು. ತುಳಸಿರಾಮ ಹಾಗೂ ಇತರರು ಸೇರಿ ರವಿ ಕೊಲೆ ಮಾಡಿದ್ದರು. ಇವರಿಗೆ ನಮ್ಮ ತಂದೆ ಬಾಗಪ್ಪ ಬೆಂಬಲ ನೀಡಿದ್ದಾರೆ ಎಂದು ರವಿ ಮೇಲಿನಕೇರಿ ಕುಟುಂಬದವರಿಗೆ ಮತ್ತು ಆತನ ಸಹೋದರನಿಗೆ ಅನುಮಾನವಿತ್ತು. ಹೀಗಾಗಿ ಬಾಗಪ್ಪ ಕೊಲೆಯಲ್ಲಿ ಪ್ರಕಾಶ ಮೇಲಿನಕೇರಿ ಕೈವಾಡವಿದೆ. ಇವರಿಗೆ ನಮ್ಮ ತಂದೆಯ ವಿರೋಧಿಗಳಾದ ಚಂದಪ್ಪ ಹರಿಜನ ಕುಟುಂಬದವರು ಹಾಗೂ ಇತರೆ ವೈರಿಗಳು ಸಾಥ್ ನೀಡಿದ್ದಾರೆಂದು ಸಹ ಆರೋಪ ಮಾಡಿದ್ದರು. ಕಲಂ 189 (2), 191 (2), 191 (3), 352, 103, 190 ಬಿಎನ್ಎಸ್ ಆ್ಯಕ್ಟ್-2023 ಮತ್ತು 25 (ಎ) ಭಾರತೀಯ ಆಯುಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.
  ಬಾಗಪ್ಪನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಗ್ಯಾಂಗ್ ನಗರದ ಆಚೆ ಮತ್ತು ಒಳಗೆ ಅಡಗಿ ಕುಳಿತಿತ್ತು. ಈ ನಿಟ್ಟಿನಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಿದ್ದ ಎಸ್ಪಿ ಲಕ್ಷ್ಮಣ ನಿಂಬರಗಿ ಬಾಗಪ್ಪನ ಕೊಲೆಗೈದು ಪರಾರಿಯಾಗಿದ್ದವರನ್ನು ಹಡೆಮುರಿ ಕಟ್ಟಲೇಬೇಕೆಂದು ಸೂಚನೆ ನೀಡಿದ್ದರು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದ ಸೂಪರ್ ಕಾಪ್​ಗಳು ಪ್ರಕಾಶ ಅಲಿಯಾಸ್​ ಪಿಂಟ್ಯಾ ಮೇಲಿನಕೇರಿ, ಹಾಗೂ ಸಹಚರರು ಎಲ್ಲೆಲ್ಲಿ ಅಡಗಿದ್ದಾರೆಂದು ಹುಡುಕಲು ಮುಂದಾಗಿದ್ದರು.
  ಈ ವೇಳೆ ಪ್ರಕಾಶ ಅಲಿಯಾಸ್​ ಪಿಂಟ್ಯಾ ಮೇಲಿನಕೇರಿ ಹಾಗೂ ಸಹಚರರು ವಿಜಯಪುರದಿಂದ ಜಮಖಂಡಿ ಮಾರ್ಗವಾಗಿ ಬೇರೆಡೆ ಹೋಗಿ ತಲೆ ಮೆರೆಸಿಕೊಳ್ಳಲು ಪ್ಲ್ಯಾನ್ ಮಾಡಿದ್ದರು. ಈ ನಿಟ್ಟಿನಲ್ಲಿ ಪರಾರಿಯಾಗುವ ವೇಳೆ ಈ ಮಾಹಿತಿ ಅರಿತ ಪೊಲೀಸರು ಪ್ರಕಾಶ ಅಲಿಯಾಸ್​ ಪಿಂಟ್ಯಾ ಮೇಲಿನಕೇರಿ ಹಾಗೂ ಸಹಚರರುನ್ನು ನಗರದ ಇಟಗಿ ಪಂಪ್ ಬಳಿ ವಶಕ್ಕೆ ಪಡೆದರು. ಪ್ರಕಾಶ ಅಲಿಯಾಸ್​ ಪಿಂಟ್ಯಾ ಮೇಲಿನಕೇರಿ (26) ಹಾಗೂ ಸಹಚರಾದ ಇಂಡಿ ತಾಲೂಕಿನ ಹೊರ್ತಿ ಗ್ರಾಮದ ರಾಹುಲ ಭೀಮಾಶಂಕರ ತಳಕೇರಿ (20) ಇಂಡಿ ತಾಲೂಕಿನ ಅಗರಖೇಡ್ ಗ್ರಾಮದ ಸುದೀಪ ಕಾಂಬಳೆ (20) ಹಾಗೂ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಬಸವೇಶ್ವರ ಕಾಲೋನಿಯ ಮಣಿಕಂಠ ಅಲಿಯಾಸ್​ ಗದಿಗೆಪ್ಪ ಶಂಕ್ರಪ್ಪ ಬೆನಕೊಪ್ಪ (27) ಪೊಲೀಸರ ಬಲೆಗೆ ಬಿದ್ದರು.
   ಇವರೆಲ್ಲರನ್ನು ವಿಚಾರಣೆಗೆ ಒಳಪಡಿಸಿದಾಗ ಬಾಗಪ್ಪ ಹರಿಜನನ್ನು ಕೊಲೆ ಮಾಡಲು ಕಾರಣವೇನೆಂದು ಹೇಳಿದ್ದಾರೆ. “ವಕೀಲ ರವಿ ಮೇಲಿನಕೇರಿ ಕೊಲೆ ನಂತರ ನನಗೆ ಬಾಗಪ್ಪ ಕಿರುಕುಳ ನೀಡುತ್ತಿದ್ದನು. ರವಿ ಗಳಿಸಿರುವ ಆಸ್ತಿ ನೀಡುವಂತೆ ಒತ್ತಾಯಿಸುತ್ತಿದ್ದನು. ಇಲ್ಲವೇ 10 ಕೋಟಿ ಹಣ ನೀಡು, ಅದೂ ಇಲ್ಲದಿದ್ದರೆ ರವಿ ಪತ್ನಿಯನ್ನು ಕಳುಹಿಸು ಅಂತ ಬಾಗಪ್ಪ ಹರಿಜನ ಕಿರುಕುಳ ನೀಡುತ್ತಿದ್ದನು. ಹೀಗಾಗಿ ನಾವು ಆತನನ್ನು ಎತ್ತಿಬಿಟ್ಟೇವು” ಎಂದು ಪಿಂಟ್ಯಾ ಮತ್ತು ಆತನ ಸಹಚರರು ಖಾಕಿ ಎದುರು ಬಾಯಿ ಬಿಟ್ಟರು.
   ಹಾಗಾದರೆ ರವಿ ಮೇಲಿನಕೇರಿ ಕೊಲೆ ಆಗಿದ್ದಾರೂ ಯಾಕೆ? ರವಿ ಕೊಲೆಯಲ್ಲಿ ಬಾಗಪ್ಪನ ಕೈವಾಡವಿತ್ತಾ. ರವಿಗೂ ಬಾಗಪ್ಪನೂ ಇದ್ದ ಸಂಬಂಧವೇನು? ರವಿ ಮೇಲಿನಕೇರಿ ಮೂಲತಃ ಇಂಡಿ ತಾಲೂಕಿನ ಅಗರಖೇಡ್ ಗ್ರಾಮದವರು. ರವಿ ಬಾಗಪ್ಪನ ಪತ್ನಿಯ ಕಡೆಯಿಂದ ಸಂಬಂಧಿಯೂ ಆಗಿದ್ದರು. ಕಳೆದ ಹಲವಾರು ವರ್ಷಗಳಿಂದ ಬಾಗಪ್ಪನ ಜೊತೆಗೆ ಗುರುತಿಸಿಕೊಂಡಿದ್ದರು. ಸಣ್ಣಪುಟ್ಟ ವ್ಯಾಜ್ಯಗಳಲ್ಲಿ ಜಗಳಗಳಲ್ಲಿ ಭಾಗಿಯಾಗಿ ಮದ್ಯಸ್ಥಿಕೆ ವಹಿಸಿ ಪರಿಹರಿಸುತ್ತಿದ್ದರು. ನಂತರ ಲಾ ಓದಿ ವಕೀಲರಾಗಿ ವಿಜಯಪುರದಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಮಕ್ಕಳು ಸಹೋದರರ ಜೊತೆಗೆ ವಾಸವಿದ್ದರು.
   ಈ ನಡುವೆ ರವಿ ಮೇಲಿನಕೇರಿ ಮತ್ತು ಬಾಗಪ್ಪ ಹರಿಜನ ನಡುವೆ ಬಿರುಕು ಮೂಡಿತ್ತು. ಅದಕ್ಕೆ ಕಾರಣ ರವಿ ಮೇಲಿನಕೇರಿ ಜೀವನ ಶೈಲಿ ಬದಲಾಗಿದ್ದು. ಜಮೀನು ಖರೀದಿ ಮಾಡಿದ್ದು, ಬಾಗಪ್ಪನ ಗಮನಕ್ಕೆ ಬರುತ್ತದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ರವಿ ಜೊತೆಗೆ ಬಾಗಪ್ಪ ಪಾಲುದಾರಿಕೆ ಹೊಂದಿದ್ದನಂತೆ. ಅದರಲ್ಲಿ ಬಂದ ಲಾಭದ ಹಂಚಿಕೆಯಲ್ಲಿ ಬಾಗಪ್ಪ ಹಾಗೂ ರವಿ ಮಧ್ಯೆ ತಕರಾರು ಬಂದಿದೆ. ಇದೇ ವೇಳೆ ರವಿ ಮೇಲಿನಕೇರಿ ನನ್ನ ಹೆಸರನ್ನು ಬಳಕೆ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿದ್ದಾನೆ. ಜಮೀನು, ಮನೆ, ಸೈಟ್​ಗಳನ್ನು ಮಾಡಿಕೊಂಡಿದ್ದಾನೆ ಎಂದು ಬಾಗಪ್ಪ ಹರಿಜನ ರವಿ ಮೇಲೆ ಹಲ್ಲು ಮಸೆಯುತ್ತಿದ್ದನು.
  ಈ ವೇಳೆ ರೌಡಿ ಶೀಟರ್ ತುಳಸಿರಾಮ ಹರಿಜನ ಹಾಗೂ ರವಿ ಮೇಲಿನಕೇರಿಗೂ ಜಗಳವಾಗಿತ್ತು. ರವಿ ಮೇಲಿನಕೇರಿ ಹಾಗೂ ಆತನ ಸಹೋದರರು ಸಹಚರರು ಸೇರಿ ತುಳಸಿರಾಮ ಹರಿಜನನ್ನು ಹೊಡೆದಿದ್ದಾರೆ. ಈ ಸಿಟ್ಟು ತುಳಸಿರಾಮಗೆ ಇತ್ತು. ಒಂದು ದಿನ ತುಳಸಿರಾಮ ಬಾಗಪ್ಪ ಹರಿಜನಗೆ ಭೇಟಿಯಾಗಿ ರವಿ ಮೇಲಿನಕೇರಿಯಿಂದ ನನಗೆ ಸಮಸ್ಯೆಯಾಗುತ್ತಿದೆ. ನೀವು ಆತನ ಬೆಂಬಲಕ್ಕೆ ಇದ್ದೀರಿ ಅಂತ ರವಿ ಬಿಂಬಿಸುತ್ತಿದ್ದಾನೆ ಎಂದು ಕೇಳುತ್ತಾನೆ. ಆಗ ಬಾಗಪ್ಪ ನಾನು ರವಿ ಮೇಲಿನಕೇರಿಗೆ ಬೆಂಬಲ ನೀಡಲ್ಲ. ನೀನು ಏನು ಬೇಕಾದರೂ ಮಾಡಿಕೋ ಎಂದು ತುಳಸಿರಾಮಗೆ ಬಾಗಪ್ಪ ಹೇಳಿದ್ದನು.
   ಬಾಗಪ್ಪನ ಮಾತು ತುಳಸಿರಾಮಗೆ ಆನೆ ಬಲ ನೀಡಿದಂತಾಗಿತ್ತು. ಬಳಿಕ ರವಿ ಮೇಲಿನಕೇರಿ ಕೊಲೆಗೆ ತುಳಸಿರಾಮ ಪಕ್ಕಾ ಪ್ಲ್ಯಾನ್ ಮಾಡಿದ್ದನು. ಆತನಿಗೆ ಅಲೇಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ, ರಾಜೇಸಾಬ ರುದ್ರವಾಡಿ ಸಾಥ್ ನೀಡಿದ್ದರು. ಇವರ ಪ್ಲ್ಯಾನ್​ನಂತೆ 2024 ರ ಅಗಷ್ಟ 8 ರವಿ ಮೇಲಿನಕೇರಿ ನ್ಯಾಯಾಲಯದಿಂದ ಸ್ಕೂಟಿ ಮೇಲೆ ಮನೆಗೆ ಹೋಗುತ್ತಿರೋವಾಗ ಹಿಂದಿನಿಂದ ಇನ್ನೋವಾ ಕಾರ್​ನಲ್ಲಿ ಬಂದು ರವಿ ತೆರಳುತ್ತಿದ್ದ ಸ್ಕೂಟಿಗೆ ಗುದ್ದಿಸಿ ಬಿಟ್ಟಿದ್ದರು. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

 

  ಈ ವೇಳೆ ರವಿ ಇನ್ನೋವಾ ಕಾರ್ ಕೆಳಗೆ ಸಿಲುಕಿ ಹಾಕಿಕೊಂಡಿದ್ದನು. ಆದರೆ ಇನ್ನೋವಾದಲ್ಲಿದ್ದ ಹಂತಕರು ಇನ್ನೋವಾದ ಕೆಳಗೆ ಸಿಕ್ಕ ರವಿಯನ್ನು ಹಾಗೇ ಎಳೆದುಕೊಂಡು ಬಸವ ನಗರ, ಆಯುರ್ವೇದ ಕಾಲೇಜ್, ಮನಗೂಳಿ ಅಗಸಿ ಮೂಲಕ ಎಳೆದುಕೊಂಡು ಹೋಗಿ ಜಿಲ್ಲಾ ಪಂಚಾಯತಿ ಪ್ರವೇಶ ದ್ವಾರದ ಬಳಿ ಬಿಸಾಕಿ ಪರಾರಿಯಾಗಿದ್ದರು. ನಂತರ ತುಳಸಿರಾಮ ಹರಿಜನ, ಅಲೇಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ, ರಾಜೇಸಾಬ ರುದ್ರವಾಡಿಯನ್ನು ಪೊಲೀಸರು ಬಂಧಿಸಿದ್ದರು.

Recent Articles

spot_img

Related Stories

Share via
Copy link