ತುಮಕೂರು:
ಕೇಂದ್ರದೊಡನೆ ಚರ್ಚಿಸುವೆ: ದಾಸೋಹ ದಿನಕ್ಕೆ ಚಾಲನೆ ನೀಡಿ ಸಿಎಂ ಹೇಳಿಕೆ
ತ್ರಿವಿಧ ದಾಸೋಹಕ್ಕೆ ಹೆಸರಾದ ಲಿಂಗೈಕ್ಯ ಡಾ.ಶ್ರೀ.ಶಿವಕುಮಾರಸ್ವಾಮೀಜಿ ಅವರ ಪುಣ್ಯಸ್ಮರಣೆಯನ್ನು ನಮ್ಮ ಸರಕಾರ ದಾಸೋಹದಿನವಾಗಿ ಘೋಷಿಸಿದ್ದು, ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡುವ ಸಂಬಂಧ ಕೇಂದ್ರದ ವರಿಷ್ಠರೊಡನೆ ಚರ್ಚಿಸುವುದಾಗಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ತಿಳಿಸಿದರು.
ಸಿದ್ಧಗಂಗಾ ಮಠದಲ್ಲಿ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿ ಅವರ ತೃತೀಯ ವರ್ಷದ ಪುಣ್ಯಸ್ಮರಣೆ ನಿಮಿತ್ತ ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ನಮಿಸಿ, ದಾಸೋಹ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಠಗಳಿಗೂ ಪಡಿತರ ಪೂರೈಕೆ: ದಾಸೋಹವು ಕರ್ನಾಟಕದ ಪರಂಪರೆ. ಈ ದಿನ ಅನ್ನ, ಅಕ್ಷರ, ಆಶ್ರಯ ದಾಸೋಹಕ್ಕೆ ಮಹತ್ವ ತಿಳಿಸುವ ಸುದಿನವಾಗಿದೆ. ಅನ್ನ ದಾಸೋಹಕ್ಕಾಗಿ ಸರ್ಕಾರ 4 ಕೆ.ಜಿ. ನೀಡಲಾಗುತ್ತಿದ್ದ ಅಕ್ಕಿಯನ್ನು 5 ಕೆ.ಜಿ.ಗೆ ಹೆಚ್ಚಿಸಿದೆ. ಜಿಲ್ಲೆಗಳ ಆಹಾರ ಪದ್ದತಿಗನುಗುಣವಾಗಿ ರಾಗಿ, ಜೋಳ, ಇತ್ಯಾದಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ.
ದಾಸೋಹ ನಡೆಸುವ ಮಠಮಾನ್ಯ ಸಂಸ್ಥೆಗಳಿಗೆ ಪಡಿತರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ರೈತ ವಿದ್ಯಾನಿಧಿ ಯೋಜನೆಯಡಿ ಮಕ್ಕಳಿಗೆ ಅಕ್ಷರ ದಾಸೋಹ ನೀಡುವ ಸೌಲಭ್ಯದೊಂದಿಗೆ ಜನವರಿ 20ರಂದು ಕಾರ್ಮಿಕರ ಮಕ್ಕಳಿಗೆ ವಿದ್ಯೆ ಒದಗಿಸುವ 150 ಕೋಟಿ ರೂ.ಗಳಿಗಿಂತ ಹೆಚ್ಚು ವಿದ್ಯಾರ್ಥಿ ವೇತನವನ್ನು ನೇರವಾಗಿ ಪಾವತಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಆಶ್ರಯ ದಾಸೋಹ ಕೈಂಕರ್ಯವನ್ನು ಸರ್ಕಾರ ಕೈಗೆತ್ತಿಕೊಂಡಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಸತಿ ಯೋಜನೆಯಡಿ 5 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಾ.ರಾಜೇಶ್‍ಗೌಡ, ಮಾಜಿ ಶಾಸಕ ಬಿ.ಸುರೇಶ್‍ಗೌಡ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಮೇಯರ್ ಬಿ.ಜಿ.ಕೃಷ್ಣಪ್ಪ, ಮಾಜಿ ಸಚಿವ ಶಿವಣ್ಣ,
ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಸಿದ್ಧಗಂಗಾ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಎಸ್.ಪರಮೇಶ್, ಆಡಳಿತಾಧಿಕಾರಿ ವಿಶ್ವನಾಥಯ್ಯ, ಪಿಆರ್‍ಓ ನಾಗರಾಜು, ಐಜಿಪಿ ಚಂದ್ರಶೇಖರ್, ಡಿಸಿ ವೈ.ಎಸ್.ಪಾಟೀಲ್, ಸಿಇಒ ಡಾ.ವಿದ್ಯಾಕುಮಾರಿ, ಎಸಿ ಅಜಯ್, ತಹಸೀಲ್ದಾರ್ ಮೋಹನ್‍ಕುಮಾರ್, ಡಾ.ಶಿವಕುಮಾರಯ್ಯ ಸೇರಿ ಹಲವು ಮುಖಂಡರು ಪಾಲ್ಗೊಂಡರು.
ಗದ್ದುಗೆಗೆ ವಿಶೇಷಾಲಂಕಾರ, ದಾಸೋಹದ ಸವಿ:
ಪುಣ್ಯಸ್ಮರಣೆ ಅಂಗವಾಗಿ ಶ್ರೀಗಳ ಗದ್ದುಗೆಗೆ ವಿಶೇಷ ಅಲಂಕಾರ, ಬಂದ ಭಕ್ತರೆಲ್ಲರಿಗೂ ಮಠದ ವಿಶೇಷ ಖಾದ್ಯವಾದ ಬೂಂದಿ, ಪಾಯಸ, ಚಿತ್ರಾನ್ನ, ಅನ್ನಸಾಂಬಾರ್, ಪಲ್ಯ, ಹೆಸರುಬೇಳಿ, ಮಜ್ಜಿಗೆಯ ದಾಸೋಹವನ್ನು ಉಣಬಡಿಸಲಾಯಿತು. ಖುದ್ದು ಸಿಎಂ ವಿದ್ಯಾರ್ಥಿಗಳಿಗೆ ದಾಸೋಹ ಬಡಿಸಿ ದಾಸೋಹ ದಿನಕ್ಕೆ ಚಾಲನೆ ಕೊಟ್ಟರು. ರಾತ್ರಿಯವರೆಗೆ ಭಕ್ತರಿಂದ ಗದ್ದುಗೆ ದರ್ಶನ, ದಾಸೋಹದ ಸೇವೆ ನಿರಂತರವಾಗಿ ನಡೆಯಿತು.
ಮುಂದಿನ ವರ್ಷದಿಂದ ದಾಸೋಹ ದಿನ ಮತ್ತಷ್ಟು ಅರ್ಥಪೂರ್ಣ
ದಾಸೋಹ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಇನ್ನಷ್ಟು ವ್ಯವಸ್ಥಿತವಾಗಿ ನಡೆಸಲಾಗುವುದು. ರಾಜ್ಯದಾದ್ಯಂತ ಸಾಧ್ಯವಾಗುವ ಕಡೆ ದಾಸೋಹ ಪರಂಪರೆ ಮಾಡಲು ಸರ್ಕಾರ ಬದ್ಧವಾಗಿದೆ. ದಾಸೋಹ ಪರಂಪರೆಗೆ ನಾಂದಿ ಹಾಡಿದ ಶ್ರೀಗಳ ಹೆಜ್ಜೆ ಗುರುತಿನಲ್ಲಿ ನಡೆಯುವ ಸಂಕಲ್ಪದಿಂದ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಎಲ್ಲರಿಗೂ ಅನ್ನ, ಅಕ್ಷರ, ಸೂರು ಒದಗಿಸುವ ಧ್ಯೇಯವನ್ನು ಸರ್ಕಾರ ಹೊಂದಿದೆ.
-ಬಸವರಾಜಬೊಮ್ಮಾಯಿ, ಮುಖ್ಯಮಂತ್ರಿ.
ಹಿರಿಯ ಶ್ರೀಗಳ ಸ್ಮರಣೆಯಲ್ಲಿ ಸರಕಾರ ಘೋಷಣೆ ಮಾಡಿರುವ ದಾಸೋಹ ದಿನಕ್ಕೆ ಸಿಎಂ ಇಂದು ಸಾಂಕೇತಿಕ ಚಾಲನೆ ನೀಡಿದ್ದಾರೆ. ಇದು ಕೇವಲ ಅನ್ನದಾಸೋಹಕ್ಕೆ ಸೀಮಿತವಾಗಿರಬಾರದು, ಜನರ ಸರ್ವತೋಮುಖ ಅಭಿವೃದ್ಧಿ ದೃಷ್ಟಿಕೋನದಿಂದ ಮುಂದೆ ಸಾಗಬೇಕು.
-ಶ್ರೀ ಸಿದ್ಧಲಿಂಗಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷರು.
ಸರಳ ಆಚರಣೆಯಾದರೂ ಭಕ್ತರ ದಂಡು
ಕೋವಿಡ್ ಮಾರ್ಗಸೂಚಿ ನಿರ್ಬಂಧಗಳ ಕಾರಣಕ್ಕೆ ಪುಣ್ಯಸ್ಮರಣೆ ಸರಳ ಎಂದು ಹೇಳಿದ್ದರೂ ಸಿದ್ಧಗಂಗಾ ಮಠಕ್ಕೆ ಭಕ್ತರ ದಂಡೇ ಆಗಮಿಸಿತ್ತು. ಸಿಎಂ ಆಗಮನದ ಸಂದರ್ಭದಲ್ಲಿ ಬಿಗಿ ನಿರ್ಬಂಧ ವಿಧಿಸಲಾಗಿತ್ತು. ಅಧಿಕ ಜನರು, ಸಮಾವೇಶಗೊಂಡಿದ್ದನ್ನು ಕಂಡು ಸಿಎಂ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಗರಂ ಆದರು.
ಮಾಧ್ಯಮದವರಿಗೂ ಸಿಎಂ ಬಂದು-ಹೋಗುವವರೆಗೆ ಮಠದ ಕಚೇರಿ ಪ್ರವೇಶ, ಗದ್ದುಗೆಗೆ ನಿರ್ಬಂಧವಿಧಿಸಲಾಗಿತ್ತು. ಗದ್ದುಗೆ ದರ್ಶನಕ್ಕೆ ಬಂದಿದ್ದ ಭಕ್ತರು ಸಹ ಮಠದಲ್ಲಿ ಬಿಗಿ ನಿರ್ಬಂಧಗಳಿಗೆ ಅಸಮಾಧಾನ ವ್ಯಕ್ತಪಡಿಸಿದರು.
ರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
