ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕಾಂಗ್ರೆಸ್ ಶಾಸಕರ ಬೆದರಿಕೆ: ಶಾಸಕ ಭರತ್ ಶೆಟ್ಟಿ ಖಂಡನೆ

ಬೆಂಗಳೂರು:

   ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಅವರು ನಟಿ ರಶ್ಮಿಕಾ ಮಂದಣ್ಣ ಕುರಿತು ಮಾಡಿರುವ ಬೆದರಿಕೆ ಮತ್ತು ಟೀಕೆಗಳನ್ನು ಕರ್ನಾಟಕದ ಬಿಜೆಪಿ ಶಾಸಕ ಭರತ್ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.

    ರಾಜಕೀಯ ಲಾಭಕ್ಕಾಗಿ ರಶ್ಮಿಕಾ ಅವರ ಹೆಸರನ್ನು ಬಳಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದೊಳಗಿನ ಕೆಲವು ಸದಸ್ಯರು ಗೂಂಡಾಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ದೇಶದಲ್ಲಿ ಯಾವುದೇ ವ್ಯಕ್ತಿಗೆ ಕಾರ್ಯಕ್ರಮಕ್ಕೆ ಬರುವ ಅಥವಾ ಕಾರ್ಯಕ್ರಮಕ್ಕೆ ಬರದಿರುವ ಹಕ್ಕಿದೆ. ರಾಜಕಾರಣಿಗಳು ಬಹಿರಂಗವಾಗಿ ಬಂದು ಅವರಿಗೆ ಈ ರೀತಿ ಬೆದರಿಕೆ ಹಾಕುವುದು ಸರಿಯಲ್ಲ. ರಕ್ಷಣೆ ನೀಡಬೇಕಾದ ಜನರು ಬದಲಿಗೆ ಬೆದರಿಕೆ ಹಾಕುತ್ತಿದ್ದಾರೆ. ಅದು ತುಂಬಾ ತಪ್ಪು,” ಎಂದು ಭರತ್ ಶೆಟ್ಟಿ ಕಿಡಿಕಾರಿದರು.

   ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಚಾಲನೆ ಕಾರ್ಯಕ್ರಮದಲ್ಲಿ ಅಹ್ವಾನದ ಹೊರತಾಗಿಯೂ ನಟಿ ರಶ್ಮಿಕಾ ಮಂದಣ್ಣ ಗೈರಾಗಿದ್ದರು. ರಶ್ಮಿಕಾ ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಗೈರಾಗಿದ್ದು, ಇದೇ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಿಡಿಸಿದ್ದರು. ಅವರ ಹೇಳಿಕೆಗಳನ್ನು ಬೆಂಬಲಿಸುತ್ತಾ ಶಾಸಕ ರವಿಕುಮಾರ್ ಗೌಡ ಗಣಿಗ ನಟಿ ರಶ್ಮಿಕಾ ಕುರಿತು ಪಾಠಕಲಿಸುವ ಎಚ್ಚರಿಕೆ ನೀಡಿದ್ದರು. 

   ಸಮುದಾಯದ ಕಾರಣದಿಂದ ಟಾರ್ಗೆಟ್: ನಟಿ ರಶ್ಮಿಕಾ ಮಂದಣ್ಣಗೆ ಸೂಕ್ತ ಭದ್ರತೆ ನೀಡಿ, ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ

ನಾವು ರಶ್ಮಿಕಾ ಅವರನ್ನು ಬೆಂಗಳೂರು ಚಲನಚಿತ್ರೋತ್ಸವಕ್ಕೆ ಕರೆದಿದ್ದೆವು. ಆದರೆ, ಅವರು ನಮ್ಮ ಆಹ್ವಾನವನ್ನು ತಿರಸ್ಕರಿಸಿದರು. ಈ ಸಂಬಂಧ ನಮ್ಮ ಬಳಿಯಿರುವ ದಾಖಲೆಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತೇವೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದ್ದರು.

  ಇದೇ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ), ನಟಿ ರಶ್ಮಿಕಾಗೆ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಒತ್ತಾಯಿಸಿತ್ತು. ‘ಕೊಡವ ಲ್ಯಾಂಡ್‌ನ ಸ್ಥಳೀಯ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದ ರಶ್ಮಿಕಾ ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಪಾರ ಯಶಸ್ಸನ್ನು ಸಾಧಿಸಿದ್ದಾರೆ.

  ಅವರು ಅಮಿತಾಬ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ಅವರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ರಶ್ಮಿಕಾ ಅವರು ಸ್ವಂತ ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿದ್ದು, ಅದನ್ನು ಗೌರವಿಸಬೇಕು ಎಂದಿತ್ತು.

   ‘ಪುಷ್ಪ 2: ದಿ ರೂಲ್’ ಮತ್ತು ‘ಛಾವಾ’ ಚಿತ್ರಗಳ ಸಕ್ಸಸ್ ಬೆನ್ನಲ್ಲೇ ಪ್ರಸ್ತುತ ರಶ್ಮಿಕಾ ಮಂದಣ್ಣ ಸಲ್ಮಾನ್ ಖಾನ್ ಜೊತೆಗಿನ ‘ಸಿಕಂದರ್’, ಧನುಷ್ ಜೊತೆಗಿನ ‘ಕುಬೇರ’ ಮತ್ತು ಆಯುಷ್ಮಾನ್ ಖುರಾನಾ ಅಭಿನಯದ ‘ಥಾಮ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Recent Articles

spot_img

Related Stories

Share via
Copy link