ಬೆಂಗಳೂರು
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಅನೇಕ ಕಡೆಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದರೆ, ಇನ್ನು ಕೆಲವಡೆ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಎದುರಾಗಿದೆ. ಮಂಗಳವಾರ ಒಂದೇ ದಿನ ರಣ ಮಳೆ ಸಂಬಂಧಿತ ಅವಘಡಗಳಲ್ಲಿ ಬೆಂಗಳೂರಿನಲ್ಲಿ ಮೂರು ಜನರು ಮೃತಪಟ್ಟಿದ್ದಾರೆ. ಮಳೆಯಿಂದ ಕಾಂಪೌಂಡ್ ಗೋಡೆ ಕುಸಿದು ಶಶಿಕಲಾ ಎಂಬ ಮಹಿಳೆ ಸಾವನ್ನಪ್ಪಿದ್ದರೆ, ಅಪಾರ್ಟ್ಮೆಂಟ್ ನೆಲಮಹಡಿಯಲ್ಲಿ ಮಳೆ ನೀರು ತೆರವುಗೊಳಿಸುವಾಗ ಇಬ್ಬರಿಗೆ ವಿದ್ಯುತ್ ಶಾಕ್ ಪ್ರವಹಿಸಿ ಮೃತಪಟ್ಟಿದ್ದಾರೆ. ಈ ನಡುವೆ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ವ್ಯಾಪರ ವಹಿವಟು ಕೂಡಾ ನೆಲಕಚ್ಚಿದೆ .
ಕೆ ಆರ್ ಮಾರುಕಟ್ಟೆ, ಯಶವಂಪುರ ಮಾರ್ಕೆಟ್ಗಳಲ್ಲಿ ವ್ಯಾಪಾರ ವಹಿವಾಟು ಮಳೆಯಿಂದ ಥಂಡಾ ಹಿಡಿದಿದೆ. ಹೂವು, ಹಣ್ಣು, ತರಕಾರಿ ಖರೀದಿಗೆ ಮಾರುಕಟ್ಟೆಗೆ ಬರುತ್ತಿದ್ದ ಜನರು ಮಳೆಗೆ ಭಯ ಬೀದ್ದು ಮನೆಯಿಂದ ಹೊರ ಬರುತ್ತಿಲ್ಲ. ಇತ್ತ ಗ್ರಾಹಕರು ಇಲ್ಲದೆ ಮಳೆಯಲ್ಲಿ ವ್ಯಾಪರವೂ ಆಗದೆ ವ್ಯಾಪಾರಿಗಳು ಕಂಗಲಾಗಿದ್ದಾರೆ.
ಸದಾ ಜನರಿಂದ ತುಂಬಿರುತ್ತಿದ್ದ, ಬೆಂಗಳೂರಿನ ವಾಣಿಜ್ಯ ವಹಿವಾಟಿನ ಪ್ರಮುಖ ಕೇಂದ್ರ ಚಿಕ್ಕಪೇಟೆಯಲ್ಲಿಯೂ ವ್ಯಾಪರ ವಹಿವಾಟು ಕುಸಿತಗೊಂಡಿದೆ. ಹಿಂದಿನ ಒಂದು ವಾರ ಭಾರತ ಹಾಗೂ ಪಾಕಿಸ್ತಾನ ಸಂಘರ್ಷದ ಹಿನ್ನಲೆ ಕೊಂಚ ವ್ಯಾಪರ ಡಲ್ ಆಗಿತ್ತು. ಈಗ ಕಳೆದ ಎರಡು ದಿನಗಳಿಂದ ಮಳೆ ಬರುತ್ತಿರುವುದರಿಂದ ಜನರು ಬರುತ್ತಿಲ್ಲ. ವ್ಯಾಪರ ಕುಸಿತವಾಗಿದೆ ಎಂದು ಚಿಕ್ಕಪೇಟೆ ವರ್ತಕರ ಸಂಘಟನೆಯ ಸಜ್ಜನ್ ರಾವ್ ತಿಳಿಸಿದ್ದಾರೆ. ಬೆಂಗಳೂರು ಮಳೆಯಿಂದ ಆಟೋ ಚಾಲಕರಿಗೂ ದೊಡ್ಡ ಸಂಕಷ್ಟ ಎದುರಾಗಿದೆ. ರಸ್ತೆಗಳ ಮೇಲೆ ನೀರು ತುಂಬಿರುವುದರಿಂದ ಆಟೋ ಓಡಿಸುವುದು ಕಷ್ಟವಾಗುತ್ತಿದೆ. ಜೊತೆಗೆ ಬುಕ್ಕಿಂಗ್ ಪ್ರಮಾಣ ಕೂಡಾ ತುಂಬಾ ಕಡಿಮೆಯಾಗಿದೆ. ಮಳೆಯ ಕಾರಣ ಜನರು ಮನೆಯಿಂದ ಹೊರ ಬರುತ್ತಿಲ್ಲ ಎಂದು ಆಟೋ ಚಾಲಕ ಶರತ್ ಎಂಬವರು ಹೇಳಿದ್ದಾರೆ.
ಮನೆ, ಅಂಗಡಿ, ಮಾರುಕಟ್ಟೆಗಳಿಗೆ ನೀರು ನುಗ್ಗಿ ಅವಾಂತರ ಒಂದಡೆಯಾದರೆ, ವ್ಯಾಪಾರ ವಹಿವಾಟು ಇಲ್ಲದೆ ಸಂಕಷ್ಟ ಮತ್ತೊಂದು ಕಡೆ ಶುರುವಾಗಿದೆ. ಒಟ್ಟಿನಲ್ಲಿ ರಾಜಧಾನಿಗೆ ಮುಂಗಾರುಪೂರ್ವ ದೊಡ್ಡ ಸಂಕಷ್ಟ ತಂದಿದೆ.
