ಮಂಡ್ಯ:
ಜಿಲ್ಲೆಯ ಮಳವಳ್ಳಿಯಲ್ಲಿ ಮೂರು ಬಸ್ಸುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯ ಬಾಚನಹಳ್ಳಿ ಸಮೀಪ ಘಟನೆ ನಡೆದಿದ್ದು, ಮಳವಳ್ಳಿ ಮಾರ್ಗವಾಗಿ ಮಹದೇಶ್ವರನ ಬೆಟ್ಟಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕೊಳ್ಳೆಗಾಲ ಕಡೆಯಿಂದ ಮಳವಳ್ಳಿಗೆ ಬರುತ್ತಿದ್ದ KSRTC ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಮೊದಲು ಎರಡು ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಡಿಕ್ಕಿಯಾಗಿ ನಿಂತಿದ್ದ ಸಂದರ್ಭದಲ್ಲಿಯೇ ಮತ್ತೊಂದು ಬಸ್ ಬಂದು ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪೈಕಿ ಇಬ್ಬರು ಮಹಿಳೆ ಹಾಗೂ ಓರ್ವ ಪುರುಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ಮಾಹಿತಿ ಲಭ್ಯವಾಗಿದೆ. ಮೃತರ ವಿವರ ಮತ್ತು ಮಾಹಿತಿ ತಿಳಿದು ಬಂದಿಲ್ಲ, ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಗಾಯಾಳುಗಳನ್ನು ಮಳವಳ್ಳಿ ಆಸ್ಪತ್ರೆಗೆ ರವಾನೆ ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಗಾಯಗೊಂಡವರನ್ನು ಮೈಸೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
