ಭೂಕುಸಿತದ ಅವಶೇಷಗಳಿಂದ ತೆವಳುತ್ತಾ ಹೊರಬಂದ ವ್ಯಕ್ತಿ

ಉತ್ತರಾಖಂಡ:

      ಮಂಗಳವಾರ ಸಂಭವಿಸಿದ ಮೇಘಸ್ಫೋಟದಿಂದ ಉತ್ತರಾಖಂಡದ ಧರಾಲಿ ಗ್ರಾಮದಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಪರಿಣಾಮ ಉತ್ತರಕಾಶಿ ಜಿಲ್ಲೆಯ ಈ ಎತ್ತರದ ಪ್ರದೇಶದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇಲ್ಲಿಯವರೆಗೆ ಕನಿಷ್ಠ ನಾಲ್ಕು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಕಾಣೆಯಾದವರನ್ನು ಹುಡುಕಲು ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ. ಪ್ರವಾಹಕ್ಕೆ ಸಿಲುಕಿದ ರಸ್ತೆ-ಮನೆಗಳು, ಉರುಳಿಬಿದ್ದ ಕಟ್ಟಡಗಳು, ಎತ್ತ ನೋಡಿದರೂ ನೀರು, ಜನರು ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ಮನಕಲಕುತ್ತಿದೆ. ಒಂದು ವಿಡಿಯೊದಲ್ಲಿ  ಮಣ್ಣಿನಿಂದ ಆವೃತವಾಗಿದ್ದರೂ ಅವಶೇಷಗಳ ರಾಶಿಯಿಂದ ಹೊರಬರುತ್ತಿರುವ ವ್ಯಕ್ತಿಯನ್ನು ಕಾಣಬಹುದು.

       ಸ್ಥಳೀಯ ಉಪನದಿಯಾದ ಖೀರ್ ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಅದು ಇದ್ದಕ್ಕಿದ್ದಂತೆ ಉಕ್ಕಿ ಹರಿದ ಪರಿಣಾಮ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಎಸ್‌ಡಿಆರ್‌ಎಫ್, ಭಾರತೀಯ ಸೇನೆ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ. ಈ ಪ್ರದೇಶದಿಂದ ಇಲ್ಲಿಯವರೆಗೆ 20ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ಇನ್ನೂ ಹೆಚ್ಚಿನವರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. 

      ಮುನ್ನೆಚ್ಚರಿಕೆ ಕ್ರಮವಾಗಿ, ಸ್ಥಳೀಯ ಆಡಳಿತವು ಬುಧವಾರ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಿದೆ. ಭಾರಿ ಮಳೆ ಮುಂದುವರಿಯುವ ನಿರೀಕ್ಷೆಯಿರುವುದರಿಂದ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಧ್ವನಿವರ್ಧಕಗಳ ಮೂಲಕ ಘೋಷಣೆಗಳನ್ನು ಮಾಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ತ್ವರಿತ ಪರಿಹಾರ ಕಾರ್ಯಗಳಿಗೆ ಕರೆ ನೀಡಿದ್ದಾರೆ. ಮೇಘಸ್ಫೋಟ ಮತ್ತು ಭೂಕುಸಿತದ ನಂತರ ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಪರಿಸ್ಥಿತಿ ಗಂಭೀರವಾಗಿರುವುದರಿಂದ, ಭಾರತೀಯ ವಾಯುಪಡೆಯು ರಕ್ಷಣಾ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್‌ಗಳನ್ನು ಬಳಸಲು ಮುಂದಾಗಿದೆ.

ರಕ್ಷಣಾ ಮೂಲಗಳ ಪ್ರಕಾರ, ಎರಡು ಚಿನೂಕ್‌, ಎರಡು Mi-17V5ಗಳು, ಎರಡು ಚೀತಾ ಮತ್ತು ಒಂದು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಸರಸವಾ, ಚಂಡೀಗಢ ಮತ್ತು ಬರೇಲಿ ವಾಯುನೆಲೆಗಳಲ್ಲಿ ಸಿದ್ಧವಾಗಿವೆ.

Recent Articles

spot_img

Related Stories

Share via
Copy link