ಭೂಮಾಪಕರು, ADLR ಗಳ ನೇಮಕಕ್ಕೆ ಕ್ರಮ : ಸಿದ್ದರಾಮಯ್ಯ

ಬೆಂಗಳೂರು: 

    ಕಂದಾಯ ಇಲಾಖೆ ಸರ್ಕಾರಕ್ಕೆ ಮಾತೃ ಇಲಾಖೆ ಇದ್ದಂತೆ. ಪೋಡಿಮುಕ್ತ ಗ್ರಾಮಗಳಾಗಬೇಕು. ಸರ್ವೇ ಕಾರ್ಯ ಪೂರ್ಣಗೊಳ್ಳಬೇಕು. ಪರವಾನಗಿ ಭೂಮಾಪಕರ ಕಾಯಂ ಮಾಡಲು ಗಂಭೀರ ಕ್ರಮದ ಜೊತೆಗೆ 36 ADLRಗಳ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದರು.

   ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಕಂದಾಯ ಇಲಾಖೆಗೆ ಅಗತ್ಯ ಇರುವಷ್ಟು ಹಣ ಕೊಟ್ಟಿದ್ದೇವೆ, ಮುಂದೆಯೂ ಕೊಡುತ್ತೇವೆ. ಅಗತ್ಯ ಸಿಬ್ಬಂದಿ ಬಲವನ್ನೂ ಕೊಟ್ಟಿದ್ದೇವೆ. ಅಗತ್ಯ ಇದ್ದರೆ ಮತ್ತೂ ಕೊಡುತ್ತೇನೆ. ಖಾಲಿ ಇರುವ ಎಲ್ಲಾ ಸರ್ವೇಯರ್ ಹುದ್ದೆಗಳ ನೇಮಕಾತಿ ಅತ್ಯಂತ ಪಾರದರ್ಶಕವಾಗಿ ಆಗಿದೆ. ಸದ್ಯದಲ್ಲೇ ನೇಮಕಾತಿ ಪತ್ರವನ್ನೂ ಕೊಡುತ್ತೇವೆ ಎಂದರು. ಹಿಂದೆ ಗೋವಿಂದೇಗೌಡರು ಪ್ರಾಮಾಣಿಕವಾಗಿ ಒಂದು ಲಕ್ಷ ಶಿಕ್ಷಕರ ನೇಮಕಾತಿ ಆಗಿರುವ ರೀತಿಯಲ್ಲೇ ಕೃಷ್ಣಬೈರೇಗೌಡರು ಸರ್ವೇಯರ್‌ಗಳ ನೇಮಕಾತಿ ಮಾಡಿದ್ದಾರೆ.

   ಪರವಾನಗಿ ಭೂಮಾಪಕರ ಕಾಯಂ ಮಾಡಲು ಗಂಭೀರ ಚಿಂತನೆ ಮಾಡಲಾಗುವುದು. ಜೊತೆಗೆ 36 ಮಂದಿ ಎಡಿಎಲ್‌ಆರ್‌ಗಳ ನೇಮಕವನ್ನೂ ಸದ್ಯದಲ್ಲೇ ಮಾಡಲಾಗುವುದು ಎಂದು ಘೋಷಿಸಿದರು.ನಮ್ಮದು ಹಳ್ಳಿಗಳ ಮತ್ತು ರೈತರ ದೇಶ. ಗ್ರಾಮಗಳು ಮತ್ತು ರೈತರು ನೆಮ್ಮದಿಯಾಗಿ ಉತ್ಪಾದನೆಯಲ್ಲಿ ತೊಡಗಬೇಕಾದರೆ ಸರ್ವೇ ಕಾರ್ಯ ಸರಿಯಾಗಿ ಪೂರ್ಣಗೊಳ್ಳಬೇಕು. ಕೆರೆ ಕಟ್ಟೆಗಳ ಒತ್ತುವರಿ ತೆರವುಗೊಳಿಸಬೇಕು, ಪೋಡಿ ಮುಕ್ತ ಗ್ರಾಮಗಳಾಗಬೇಕು. ಇದಕ್ಕಾಗಿ ಇಲಾಖೆಯ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಶ್ರಮಿಸಿ, ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡುವುದೇ ನಿಜವಾದ ಪುಣ್ಯದ ಕಾರ್ಯ ಎಂದು ಕರೆ ನೀಡಿದರು.