ಮಹಾಕುಂಭ ನಗರ:
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಮಂಗಳವಾರ ಭೇಟಿ ನೀಡಿದ ಭೂತಾನ್ ದೊರೆ ಜಿಗ್ಮೆ ಖೇಸರ್ ನಮ್ಗೇಲ್ ವಾಂಗ್ ಚುಕ್ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಯಲ್ಲಿ ಗಂಗಾ, ಯುಮುನಾ ಮತ್ತು ಸರಸ್ವತಿ ನದಿಗಳ ಸಂಗಮ ತಾಣಕ್ಕೆ ಆಗಮಿಸಿದ ಭೂತನ್ ದೊರೆ, ನದಿ ನೀರಿನಲ್ಲಿ ಮಿಂದೆದ್ದರು. ಇದಕ್ಕೂ ಮುನ್ನಾ ಸೂರ್ಯನಿಗೆ ‘ಅರ್ಘ್ಯ’ ಅರ್ಪಿಸಿದರು.
ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಭೂತಾನ್ ನ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದ ವಾಂಗ್ ಚುಕ್ , ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ತೆರಳಿದಾಗ ಉದ್ದನೆಯ ಕೇಸರಿ ಬಣ್ಣದ ಕುರ್ತಾ ಮತ್ತು ಪೈಜಾಮಾ ಧರಿಸಿದರು. ನೂತನ ಮಹಾಮಂಡಲೇಶ್ವರ ಸಂತೋಷ್ ದಾಸ್ ಜಿ ಮಹಾರಾಜ್ ಅವರೊಂದಿಗೆ ಉತ್ತರ ಪ್ರದೇಶ ಸಚಿವರಾದ ಸ್ವತಂತ್ರ ದೇವ್ ಸಿಂಗ್, ನಂದ ಗೋಪಾಲ್ ಗುಪ್ತಾ, ಯೋಗಿ ಆದಿತ್ಯನಾಥ್ ಹಾಗೂ ವಾಂಗ್ ಚುಕ್ ಪುಣ್ಯ ಸ್ನಾನ ಮಾಡುತ್ತಿರುವ ಚಿತ್ರವನ್ನು ಉತ್ತರ ಪ್ರದೇಶ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ನಿನ್ನೆಯೇ ಲಖನೌಗೆ ಆಗಮಿಸಿದ ಭೂತಾನ್ ರಾಜನಿಗೆ ರಾಜಭವನದಲ್ಲಿ ರಾಜ್ಯಪಾಲ ಆನಂದಿಬೆನ್ ಪಟೇಲ್ ಆತಿಥ್ಯ ನೀಡಿದರು. ಇದೇ ವೇಳೆ ರಾಜ್ಯಪಾಲರು- ಮುಖ್ಯಮಂತ್ರಿ ವಾಂಗ್ ಚುಕ್ ಅವರೊಂದಿಗೆ ಭಾರತ-ಭೂತಾನ್ ಸಂಬಂಧಗಳ ಬಗ್ಗೆ ವಿವರವಾದ ಚರ್ಚೆಗಳನ್ನು ನಡೆಸಿದರು.