ಉಪಚುನಾವಣೆ ಗೆಲುವಿಗಾಗಿ ಜೋಡಿಯಾದ ಹಳೆ ಗೆಳಯರು …!

ಬಳ್ಳಾರಿ:

   ಸಂಡೂರು ಉಪಚುನಾವಣೆ ಅಖಾಡ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಬಂಗಾರು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇದುವರೆಗೂ ಪ್ರಚಾರದಿಂದ ದೂರವೇ ಉಳಿದಿದ್ದ ಮಾಜಿ ಸಚಿವ ಶ್ರೀರಾಮುಲು ಕೊನೆಗೂ ಸಂಡೂರು ಉಪಚುನಾವಣೆ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದು, ಜನಾರ್ದನ ರೆಡ್ಡಿ ಜೊತೆ ಜಂಟಿ ಪ್ರಚಾರ ಆರಂಭಿಸಿದ್ದಾರೆ. ಇಬ್ಬರು ನಾಯಕರ ಜಂಟಿ ಪ್ರಚಾರ ಹಲವರ ಹುಬ್ಬೇರುವಂತೆ ಮಾಡಿದೆ.

   2023ರ ಚುನಾವಣೆ ವೇಳೆ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಆಂತರಿಕ ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ಬಳಿಕ ರೆಡ್ಡಿಯವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸ್ಥಾಪನೆ ಮಾಡಿದರು. ಬಳಿಕ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನ ಮಾಡಿದರು. ಈ ನಡುವೆ 14 ವರ್ಷಗಳ ನಂತರ ರೆಡ್ಡಿಯವರು ಬಳ್ಳಾರಿಗೆ ಮರಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ಇದೀಗ ರೆಡ್ಡಿಯವರು ಜಿಲ್ಲೆಗೆ ಮರಳಿದ್ದಾರೆ. ಈ ಮೂಲಕ ಜಿಲ್ಲಾ ಬಿಜೆಪಿ ಘಟಕಕ್ಕೆ ಬಹುದೊಡ್ಡ ಶಕ್ತಿ ದೊರಕಿದಂತಾಗಿದೆ.

   ಆಂತರಿಕ ಸಮಸ್ಯೆಯಿಂದ ಹಿಂದೆ ಸರಿದಿದ್ದ ರಾಮುಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನವೊಲಿಸಿದ್ದರು. ನಾಮಪತ್ರ ಸಲ್ಲಿಕೆ ಬಳಿಕ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದ ರಾಮುಲು, ಅದರಂತೆ ಪ್ರಚಾರದಲ್ಲಿ ತೊಡಗಿದ್ದರು. ಪ್ರಚಾರದ ವೇಳೆ ಮಾತನಾಡಿದ ರೆಡ್ಡಿಯವರು, ನಾನು ಮತ್ತು ಶ್ರೀರಾಮುಲು ಉತ್ತಮ ಗೆಳೆಯರು. ನಾಮಪತ್ರ ಸಲ್ಲಿಸಿದ ನಂತರ ಪ್ರಚಾರಕ್ಕೆ ಬರುವುದಾಗಿ ಕೆಲ ದಿನಗಳ ಹಿಂದೆ ಹೇಳಿದ್ದರು. ಇದರಂತೆ ನಾವಿಬ್ಬರೂ ಕಳೆದ ಎರಡು ದಿನಗಳಿಂದ ಸಂಡೂರು ತಾಲೂಕಿನ ಗ್ರಾಮಗಳಿಗೆ ಚುನಾವಣಾ ಪ್ರಚಾರಕ್ಕೆ ಭೇಟಿ ನೀಡುತ್ತಿದ್ದೇವೆ. ಉಪಚುನಾವಣೆಯಲ್ಲಿ ಗೆದ್ದು ಇತಿಹಾಸ ಸೃಷ್ಟಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

   ಶ್ರೀರಾಮುಲು ಮಾತನಾಡಿ, ಉಪಚುನಾವಣೆ ಗೆಲ್ಲುವ ಸಮಯ ಬಂದಿದೆ. ಸ್ನೇಹಿತ ರೆಡ್ಡಿ ಜೊತೆಗೆ ಪ್ರತಿದಿನ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಂತೆ ಮಾಡುತ್ತೇವೆಂದು ತಿಳಿಸಿದರು.

   ಇನ್ನು ರಾಮುಲು- ಜನಾರ್ದನ ರೆಡ್ಡಿ ಜಂಟಿ ಪ್ರಚಾರದ ನಡುವೆಯೂ ಬಿಜೆಪಿ ನಾಯಕರಿಗೆ ಒಳೇಟಿನ ಆತಂಕ ಕಾಡುತ್ತಿದೆ. ಇತ್ತ ಕಾಂಗ್ರೆಸ್‌ನಲ್ಲೂ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೂ ಯಾರೊಬ್ಬರೂ ಇದುವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗಿಲ್ಲ. ಸಂಸದ ತುಕಾರಾಂ ಹಾಗೂ ಪತ್ನಿ ಅನ್ನಪೂರ್ಣ ತುಕಾರಾಂ ಮಾತ್ರ ಪ್ರಚಾರ ಮಾಡುತ್ತಿದ್ದಾರೆ

Recent Articles

spot_img

Related Stories

Share via
Copy link