ಬೀದರ್‌ ಬೆಂಗಳೂರು ವಿಮಾನ ಹಾರಾಟ ಇಂದಿನಿಂದ ಶುರು

ಬೀದರ್

    ಬೀದರ್  ಜಿಲ್ಲೆಯಿಂದ ರಾಜ್ಯ ರಾಜ್ಯಧಾನಿ ಬೆಂಗಳೂರಿಗೆ  ವಿಮಾನ ಹಾರಾಡಬೇಕೆಂಬ  ಆಸೆ ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯ ಜನರ ಬಹುದೊಡ್ಡ ಆಸೆಯಾಗಿತ್ತು. ಇದಕ್ಕಾಗಿ ಹತ್ತಾರು ಹೋರಾಟಗಳನ್ನು ಸಹ ಮಾಡಲಾಗಿತ್ತು. ಜನರ ಹೋರಾಟಕ್ಕೆ ಮಣಿದಿದ್ದ ಕೇಂದ್ರ ಸರಕಾರ 7 ಪೆಬ್ರುವರಿ 2020 ರಂದು ಬೀದರ್​​ನಿಂದ ಬೆಂಗಳೂರಿಗೆ 72 ಸೀಟ್​​ನ ಟ್ರೋಜೆಟ್ ವಿಮಾನದ ಹಾರಾಟ ಆರಂಭಿಸಿತ್ತು. ಆದರೆ ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟದಿಂದಾಗಿ ಟ್ರೂಜೇಟ್ ವಿಮಾನ ಕೆಲವು ತಿಂಗಳಲ್ಲಿಯೇ ಹಾರಾಟ ನಿಲ್ಲಿಸಿತ್ತು. ಇದಾದ ಬಳಿಕ ಒಂದು ವರ್ಷಗಳ ಕಾಲ ವಿಮಾನ ಹಾರಾಡಲೇ ಇಲ್ಲ.

    ಪ್ರಯಾಣಿಕರು ಹೈದರಾಬಾದ್​​ಗೆ ಹೋಗಿ ಅಲ್ಲಿಂದ ವಿಮಾಣದ ಮೂಲಕ ಬೆಂಗಳೂರು ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡುತ್ತಿದ್ದರು. ಇದು ಪ್ರಯಾಣಿಕರಿಗೆ ಕಷ್ಟವಾಗತೊಡಗಿದಾಗ ಪ್ರಯಾಣಿಕರ ಒತ್ತಾಯದ ಮೇರೆಗೆ ಮತ್ತೆ 2022 ಜೂನ್ 15 ರಂದು ಸ್ಟಾರ್ ಏರ್ ವಿಮಾನ ಹಾರಾಟ ಆರಂಭಿಸಿತು. ಆದರೆ ಕಳೆದ ಒಂದೂವರೆ ವರ್ಷದಿಂದ ಆರ್ಥಿಕ ನಷ್ಟದಿಂದಾಗಿ ಸಂಚಾರ ನಿಲ್ಲಿಸಿತ್ತು. ಈಗ ಮತ್ತೆ ಬೀದರ್​ನಿಂದ ವಿಮಾನ ಹಾರಾಟ ಆರಂಭವಾಗುತ್ತಿದೆ. ಸಾರ್ವಜನರಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. 

   ವಿಮಾನ ಹಾರಾಟಕ್ಕೆ ಎದುರಾಗಿದ್ದ ಎಲ್ಲ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲಾಗಿದ್ದು, ಇಂದಿನಿಂದ ಸ್ಟಾರ್‌ ಏರ್‌ಲೈನ್ಸ್‌ ವಿಮಾನ ಹಾರಾಟ ನಡೆಸಲಿದೆ. ಒಂದು ತಿಂಗಳ ಹಿಂದಿನಿಂದಲೇ ಸ್ಟಾರ್‌ ಏರ್‌ಲೈನ್ಸ್‌ ಆನ್‌ಲೈನ್‌ನಲ್ಲಿ ವಿಮಾನದ ಟಿಕೆಟ್‌ ಬುಕ್ಕಿಂಗ್‌ ಕೂಡ ಆರಂಭಿಸಿತ್ತು. 

   ಬೆಳಿಗ್ಗೆ 7.45ಕ್ಕೆ ಬೆಂಗಳೂರಿನಿಂದ ಬೀದರ್‌ ಕಡೆಗೆ ವಿಮಾನ ಸಂಚರಿಸಲಿದೆ. ಅದೇ ದಿನ ಬೆಳಿಗ್ಗೆ 9.30ಕ್ಕೆ ಬೀದರ್‌ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ. ವಿಮಾನದ ಟಿಕೆಟ್‌ ಬುಕ್ಕಿಂಗ್‌ ಆರಂಭಗೊಂಡು ವಿಮಾನ ಹಾರಾಟ ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ಬೇಡಿಕೆಯ ಸಮಯಕ್ಕೆ ತಕ್ಕಂತೆ ವಿಮಾನ ಸಂಚರಿಸದ ಕಾರಣ ಕಂಪನಿಯ ಆದಾಯದಲ್ಲಿ ನಷ್ಟ ಉಂಟಾಗಿ ಸ್ಟಾರ್‌ ಏರ್‌ ವಿಮಾನ ಸಂಚಾರ ಒಪ್ಪಂದದ ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ 2023ರ ಡಿಸೆಂಬರ್‌ 26ರಂದು ಸ್ಥಗಿತಗೊಂಡಿತ್ತು. ವಿಮಾನ ಹಾರಾಟದ ಸಮಯ ಬದಲಿಸಿ ವಿಮಾನ ಸಂಚಾರ ಪುನರಾರಂಭಿಸಬೇಕೆಂದು ವಿವಿಧ ಸಂಘ ಸಂಸ್ಥೆಗಳು ಸರ್ಕಾರವನ್ನು ಆಗ್ರಹಿಸಿದ್ದವು. 

   ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರ ಮನವೊಲಿಸಿ, ವಿಮಾನ ಸೇವೆ ಆರಂಭಿಸುವುದಕ್ಕೆ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ 13.48 ಕೋಟಿ ರೂ. ಅನುದಾನಕ್ಕೆ ಅನುಮೋದನೆ ಪಡೆದಿದ್ದರು. ಸಚಿವ ಸಂಪುಟವೂ ಒಪ್ಪಿಗೆ ನೀಡಿತ್ತು. ಹೀಗಾಗಿ ಇಂದಿನಿಂದ ವಿಮಾನ ಹಾರಾಟ ಶುರುವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

Recent Articles

spot_img

Related Stories

Share via
Copy link