ಇಸ್ಲಾಮಾಬಾದ್:
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೊಸ ತಿರುವು ಪಡೆದುಕೊಂಡಿದ್ದು, ಪಾಕಿಸ್ತಾನ ಭಾರತೀಯ ಹೈಕಮಿಷನ್ ಸಿಬ್ಬಂದಿಗೆ ಮೂಲಭೂತ ಸೌಕರ್ಯಗಳ ಮೇಲೆ ನಿರ್ಬಂಧವನ್ನು ಹೇರಿದೆ. ಭಾರತೀಯ ಸೇನೆಯ ಯಶಸ್ವಿ ಆಪರೇಷನ್ ಸಿಂದೂರ್ ಹಾಗೂ ಸಿಂಧೂ ಜಲ ಒಪ್ಪಂದದ ನಿರ್ಣಾಯಕ ಜಾರಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ನ (ಐಎಸ್ಐ) ಪ್ರತೀಕಾರದ ಭಾಗವಾಗಿದ್ದು, ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಜತಾಂತ್ರಿಕರ ಜೀವನ ಮತ್ತು ಕೆಲಸದ ಪರಿಸ್ಥಿತಿಗಳನ್ನು ಅಡ್ಡಿಪಡಿಸುವ ಗುರಿಯನ್ನು ಹೊಂದಿವೆ ಎಂದು ಸರ್ಕಾರಿ ಉನ್ನತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಸುಯಿ ನಾರ್ದರ್ನ್ ಗ್ಯಾಸ್ ಪೈಪ್‌ಲೈನ್ಸ್ ಲಿಮಿಟೆಡ್ ಈಗಾಗಲೇ ಭಾರತೀಯ ಹೈಕಮಿಷನ್ ಆವರಣದಲ್ಲಿ ಅನಿಲ ಪೈಪ್‌ಲೈನ್‌ಗಳನ್ನು ಅಳವಡಿಸಿದೆ. ಆದಾಗ್ಯೂ, ಪೂರೈಕೆಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯಲಾಗಿದೆ. ಈ ಹಿಂದೆ ಸ್ಥಳೀಯ ಅನಿಲ ಸಿಲಿಂಡರ್ ಮಾರಾಟಗಾರರಿಗೆ ಪಾಕಿಸ್ತಾನಿ ಅಧಿಕಾರಿಗಳು ಭಾರತೀಯ ಸಿಬ್ಬಂದಿಗೆ ಮಾರಾಟ ಮಾಡದಂತೆ ಸೂಚಿಸಿದ್ದಾರೆ ಎಂದು ವರದಿಯಾಗಿತ್ತು.
ಅಷ್ಟೇ ಅಲ್ಲದೆ ಶುದ್ಧ ಕುಡಿಯುವ ನೀರಿನ ಗುತ್ತಿಗೆದಾರರಿಗೂ ಭಾರತೀಯ ಅಧಿಕಾರಿಗಳ ಜೊತೆ ಸಂಪರ್ಕವನ್ನು ನಿಷೇಧಿಸಲಾಗಿದೆ. ಸ್ಲಾಮಾಬಾದ್‌ನಲ್ಲಿರುವ ಎಲ್ಲಾ ಮಾರಾಟಗಾರರಿಗೆ ಹೈಕಮಿಷನ್‌ಗೆ ಖನಿಜಯುಕ್ತ ನೀರನ್ನು ಒದಗಿಸದಂತೆ ಸೂಚನೆ ನೀಡಲಾಗಿದೆ. ಮಾಹಿತಿ ಹರಿವನ್ನು ನಿರ್ಬಂಧಿಸುವ ಮತ್ತಷ್ಟು ಪ್ರಯತ್ನದಲ್ಲಿ, ಪತ್ರಿಕೆ ಮಾರಾಟಗಾರರಿಗೆ ರಾಯಭಾರಿ ಕಚೇರಿಗೆ ಪತ್ರಿಕಗಳ ಸರಬರಾಜನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲದೆ ಅವರ ಕುಟುಂಬಗಳಿಗೆ ತೊಂದರೆ ನೀಡಲು ಹಲವು ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ.
ಈ ಕ್ರಮಗಳು ರಾಜತಾಂತ್ರಿಕ ಸಂಬಂಧಗಳ ಕುರಿತಾದ ವಿಯೆನ್ನಾ ಸಮಾವೇಶವನ್ನು ಉಲ್ಲಂಘಿಸುವುದಲ್ಲದೆ – ಇದು ರಾಯಭಾರ ಕಚೇರಿಗಳ ಸುಗಮ ಕಾರ್ಯನಿರ್ವಹಣೆ ಮತ್ತು ಅವರ ಸಿಬ್ಬಂದಿಯ ಸುರಕ್ಷತೆಗೆ ದಕ್ಕೆ ತರುತ್ತವೆ. ನೇರವಾಗಿ ಮಾತುಕತೆ ನಡೆಸುವ ಬದಲು ಈ ರೀತಿ ರಾಜತಾಂತ್ರಿಕವಲ್ಲದ ಒತ್ತಡ ತಂತ್ರಗಳನ್ನು ಬಳಸುತ್ತಿರುವುದು ಖಂಡನೀಯ. 2019 ರ ಪುಲ್ವಾಮಾ ದಾಳಿ ಮತ್ತು ನಂತರದ ಬಾಲಕೋಟ್ ವೈಮಾನಿಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಗಳು ನಡೆದಿಲ್ಲ.
