ಯುನೈಟೆಡ್ ಸ್ಟೇಟ್ಸ್:
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸ್ಫರ್ಧೆಯಿಂದ ಹೊರಗುಳಿಯುವುದಾಗಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ಭಾನುವಾರ ಘೋಷಿಸಿದ್ದಾರೆ.
ಡೆಲವೇರ್‌ನಲ್ಲಿರುವ ತಮ್ಮ ಬೀಚ್ ಹೌಸ್‌ನಲ್ಲಿ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವಂತೆಯೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪತ್ರವೊಂದನ್ನು ಫೋಸ್ಟ್ ಮಾಡಿರುವ 81 ವರ್ಷದ ಡೆಮಾಕ್ರಟಿಕ್ ಪಕ್ಷದ ಬೈಡನ್, “ಅಧ್ಯಕ್ಷರಾಗಿ ನಿಮಗೆ ಸೇವೆ ಸಲ್ಲಿಸುವುದು ನನ್ನ ಜೀವನದ ದೊಡ್ಡ ಗೌರವವಾಗಿದೆ ಎಂದಿದ್ದಾರೆ.
“ಮರು ಚುನಾವಣೆಯನ್ನು ಬಯಸುವುದು ನನ್ನ ಉದ್ದೇಶವಾಗಿದ್ದರೂ, ನನ್ನ ಪಕ್ಷ ಮತ್ತು ದೇಶದ ಹಿತದೃಷ್ಟಿಯಿಂದ ನನ್ನ ಉಳಿದ ಅವಧಿಗೆ ಅಧ್ಯಕ್ಷನಾಗಿ ನನ್ನ ಕರ್ತವ್ಯಗಳನ್ನು ಪೂರೈಸುವುದರ ಮೇಲೆ ಗಮನ ಹರಿಸುವುದು ಉತ್ತಮವಾಗಿದೆ ಎಂದು ಭಾವಿಸುತ್ತೇನೆ. ಈ ವಾರದ ನಂತರ ನನ್ನ ನಿರ್ಧಾರದ ಬಗ್ಗೆ ರಾಷ್ಟ್ರದೊಂದಿಗೆ ಹೆಚ್ಚು ವಿವರವಾಗಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷವು ಈಗ ಗೊಂದಲದಲ್ಲಿ ಮುಳುಗಿದ್ದು, ನವೆಂಬರ್ ಚುನಾವಣೆಯ ವೇಳೆಗೆ ಹೊಸ ಅಭ್ಯರ್ಥಿಯನ್ನು ಹುಡುಕಬೇಕಾಗಿದೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮುಂಚೂಣಿಯಲ್ಲಿದ್ದಾರೆ. ಬೈಡನ್ ಆರೋಗ್ಯ ಕುರಿತು ವ್ಯಾಪಕವಾಗಿ ಚರ್ಚೆ ನಡೆಯುತಿತ್ತು. ಬೈಡನ್ ಚುನಾವಣೆ ಕಣದಿಂದ ಹಿಂದೆ ಸರಿಯುವಂತೆಯೂ ಒತ್ತಡ ಕೇಳಿಬರುತಿತ್ತು. ಈ ನಡುವೆ ಬೈಡನ್ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಬೈಡನ್ ಯುಎಸ್ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲಿ ರೇಸ್ ನಿಂದ ತಡವಾಗಿ ಹೊರಬಂದ ಮೊದಲ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಆರೋಗ್ಯ ಮತ್ತು ಮಾನಸಿಕ ತೀಕ್ಷ್ಣತೆ ಕಳವಳದಿಂದ ತಲೆಬಾಗಿದ ಮೊದಲಿಗ ಅಧ್ಯಕ್ಷರೂ ಆಗಿದ್ದಾರೆ.
ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಜೂನ್ 27 ರಿಂದ ಚರ್ಚೆ ಆರಂಭವಾಗಿತ್ತು. ಆದರೆ, ಮೂರು ವಾರಗಳ ನಂತರ ತಡವಾಗಿ ಬೈಡನ್ ತಮ್ಮ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಅವರ ಪಕ್ಷದಲ್ಲಿಯೇ ಒತ್ತಡ ಹೆಚ್ಚಾಗಿತ್ತು. ನಟ ಜಾರ್ಜ್ ಕ್ಲೋನಿಯಿಂದ ಹಿಡಿದು ಮಾಜಿ ಅಧ್ಯಕ್ಷ ಬರಾಕ್ ಒಮಾಮಾದವರೆಗೂ ಹಲವರು ಬೈಡನ್ ಚುನಾವಣೆಗೆ ಸ್ಪರ್ಧಿಸಬಾರದು ಎಂದು ಹೇಳಿದ್ದರು. ಅಂತಿಮವಾಗಿ ಕೋವಿಡ್ ನಿಂದ ಚಿಕಿತ್ಸೆಗೊಳಗಾಗಿ ಪ್ರಚಾರದಿಂದ ದೂರ ಸರಿದದ್ದು ಅವರು ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಿದೆ.
ಜುಲೈ 13 ರಂದು ಡೊನಾಲ್ಡ್ ಟ್ರಂಪ್ ಹತ್ಯೆ ವಿಫಲ ಯತ್ನ ನಡೆದಿತ್ತು. ಇದರ ಬೆನ್ನಲ್ಲೇ ಚುನಾವಣಾ ಕಣದಿಂದ ಹಿಂದೆ ಸರಿಯುವ ಬೈಡನ್ ನಿರ್ಧಾರ ಅಧ್ಯಕ್ಷೀಯ ಚುನಾವಣೆ ವೇಳೆಯಲ್ಲಿನ ಅಲ್ಲಿನ ರಾಜಕೀಯ ಪ್ರಕ್ಷುಬ್ಧತೆ ಪರಿಸ್ಥಿತಿಯ ಚರ್ಚೆಗೂ ಕಾರಣವಾಗಿದೆ. ಈ ಮೂಲಕ ಬೈಡನ್ ಕೇವಲ ಒಂದೇ ವರ್ಷ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕ್ಲಬ್ ಸೇರಿದ್ದಾರೆ. ಕೊನೆಯದಾಗಿ 1968ರಲ್ಲಿ ಲಿಂಡನ್ ಜಾನ್ಸನ್ ಒಂದು ಅವಧಿ ಪೂರೈಸಿದ್ದರು. ಬೈಡನ್ ನಂತರ ಈಗ ಡೆಮಾಕ್ರಟಿಕ್ ಪಕ್ಷದಲ್ಲಿ ಕಮಲಾ ಹ್ಯಾರಿಸ್ ಮಾತ್ರ ಟ್ರಂಪ್ ಗೆ ಸೂಕ್ತ ಎದುರಾಳಿ ಎನ್ನಲಾಗುತ್ತಿದೆ.
