ನಮ್ಮ ಮೆಟ್ರೋ : ಕೂದಲೆಳೆಯ ಅಂತರದಲ್ಲಿ ತಪ್ಪಿದ ಅನಾಹುತ

ಬೆಂಗಳೂರು:

       ಬೆಂಗಳೂರಿನ ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿ ಹಳಿ ಬಿರುಕು ಬಿಟ್ಟಿದ್ದು, ಮೆಟ್ರೋ ಸಂಚಾರದಲ್ಲಿ ಸ್ವಲ್ಪವೇ ಅಂತರದಲ್ಲಿ ಬೃಹತ್‌ ಅನಾಹುತ ನಡೆಯುವುದು ತಪ್ಪಿದಂತಾಗಿದೆ. ಹಳಿ ಬಿರುಕು ಬಿಟ್ಟ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

     ನಮ್ಮ ಮೆಟ್ರೋದ ನೇರಳೆ ಮಾರ್ಗದ ಮೆಟ್ರೋ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಡವಾಗಿ ಈ ವಿಚಾರ ಬೆಳಕಿಗೆ ಬಂದಿದೆ. ಮೆಜೆಸ್ಟಿಕ್‌ನಿಂದ ಕೆಂಗೇರಿ ಕಡೆಗೆ ಸಾಗುವ ನೇರಳೆ ಮಾರ್ಗದ ಮೈಸೂರು ರಸ್ತೆಯಲ್ಲಿ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಪಟ್ಟಣಗೆರೆ ಮೆಟ್ರೋ ನಿಲ್ದಾಣದ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಬಿಟ್ಟಿರುವುದು ಪತ್ತೆಯಾಗಿದೆ. ಹಳಿ ಹಾಕಿದ ಮೂರು ವರ್ಷದೊಳಗೆ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಶಂಕೆಗೆ ಕಾರಣವಾಗಿದೆ.

     ಇನ್ನು ಹಳಿ ಬಿರುಕು ಕಾಣಿಸಿಕೊಂಡಿದ್ದನ್ನು ಮೆಟ್ರೋ ಪೈಲೆಟ್ ಹಾಗೂ ಕೆಳಮಟ್ಟದ ಸಿಬ್ಬಂದಿ ಗಮನಿಸಿದ್ದಾರೆ. ಹಳಿ ಬಿರುಕು ಹಿನ್ನೆಲೆಯಲ್ಲಿ ಹಳಿಯ ಶಬ್ದ, ವೇಗದಲ್ಲಿ ಬದಲಾವಣೆ ಆಗಿದೆ. ಮೆಟ್ರೋ ಲೈನ್‌ನ ಟ್ರ್ಯಾಕ್‌ನಲ್ಲಿ ಬಿರುಕು ಬಿಟ್ಟುಕೊಂಡಿದ್ದು, ಅದನ್ನು ಸಾರ್ವಜನಿಕರ ಗಮನಕ್ಕೆ ತರದೇ ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿ. (ಬಿಎಂಆರ್‌ಸಿಎಲ್) ದುರಸ್ತಿ ಮಾಡಿದೆ. ಇನ್ನು ಇದೇ ಟ್ರ್ಯಾಕ್ ನಲ್ಲಿ ಮೆಟ್ರೋ ರೈಲು ಸಂಚಾರ ಮಾಡಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದು ನಿಗಮದ ಸಿಬ್ಬಂದಿ ತಿಳಿಸಿದ್ದಾರೆ. 

     ಕೇವಲ ಮೂರು ವರ್ಷಗಳಲ್ಲಿ ಟ್ರ್ಯಾಕ್‌ನಲ್ಲಿ ಬಿರುಕು ಬಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿಯಲ್ಲಿ ಏನಾದರೂ ಲೋಪವಾಗಿದೆಯೇ.? ಎಂಬ ಅನುಮಾನವೂ ಕಾಡುತ್ತಿದೆ. ಹೊಸದಾಗಿ ನಿರ್ಮಿಸಿದ ಟ್ರ್ಯಾಕ್ ಬಿರುಕು ಬೀಳಲು ಕಾರಣವೇನು? ಎಂಬುದು ತಿಳಿದುಬಂದಿಲ್ಲ. ಇನ್ನು ಸಾರ್ವಜನಿಕರ ಗಮನಕ್ಕೂ ತರದೇ ತಾಂತ್ರಿಕ ತೊಂದರೆ ಎಂಬ ಅಸ್ತ್ರವನ್ನು ಬಳಸಿಕೊಂಡು ಬಿಎಂಆರ್ ಸಿಎಲ್ ಸಿಬ್ಬಂದಿ ನಿಗೂಢವಾಗಿ ಹಳಿ ಬಿರುಕನ್ನು ದುರಸ್ಥಿ ಮಾಡಿದ್ದಾರೆ. ಆದರೆ, ಕಾಮಗಾರಿಯ ಲೋಪದ ಬಗ್ಗೆ ಬಹಿರಂಗಪಡಿಸದೇ ಬಿಎಂಆರ್‌ಸಿಎಲ್ ನಿರ್ಲಕ್ಷ್ಯವಹಿಸಿದೆಯೇ ಎಂಬ ಅನುಮಾನವೂ ಶುರುವಾಗಿದೆ. ಈ ಮೂಲಕ ಗುತ್ತಿಗೆದಾರರನ್ನು ಬಚಾವ್ ಮಾಡಲಾಗುತ್ತಿದೆ ಎಂಬ ಗುಮಾನಿಯೂ ಕಂಡುಬರುತ್ತಿದೆ.

     ಮೆಟ್ರೋ ಹಳಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್‌ ಸಿಬ್ಬಂದಿ ಟ್ರ್ಯಾಕ್‌ ಅನ್ನು ದುರಸ್ತಿ ಮಾಡಿದ್ದಾರೆ. ಈ ವೇಳೆ ಇಡೀ ದಿನ ಮತ್ತೊಂದು ಟ್ರ್ಯಾಕ್ ನಲ್ಲಿ ಮೆಟ್ರೋ ಓಡಾಟ ಮಾಡುವಂತೆ ವ್ಯವಸ್ಥೆ ಮಾಡಲಾಗಿತ್ತು. ಟ್ರ್ಯಾಕ್ ಸರಿಪಡಿಸಿದ ನಂತರ ಎರಡು ಹಳಿಯಲ್ಲಿ‌ ಎಂದಿನಂತೆ ಮೆಟ್ರೋ ರೈಲು ಆಪರೇಷನ್‌ (Metro rail operation) ಮುಂದುವರೆಸಲಾಗಿದೆ. ಆದರೆ, ಅಲ್ಲಿ ಯಾವ ಲೋಪವಾಗಿದೆ, ಯಾರು ಲೋಪವಾಗಲು ಕಾರಣವಾಗಿದ್ದಾರೆ ಎಂಬುದು ಎಲ್ಲಿಯೂ ಬಹಿರಂಗವಾಗಿಲ್ಲ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap