ಬೆಂಗಳೂರು:
ರಾಜ್ಯ ರಾಜಧಾನಿ ಬೆಂಗಳೂರಿಗರನ್ನು ಬುಧವಾರ ಬೆಳ್ಳಂಬೆಳಗ್ಗೆ ಆಘಾತಕಾರಿ ಸುದ್ದಿಯೊಂದು ಬೆಚ್ಚಿಬೀಳಿಸಿದೆ. ನಿಖರ ಮಾಹಿತಿ ಪಡೆದು ನಗರ ಅಪರಾಧ ವಿಭಾಗ ಪೊಲೀಸರು 5 ಜನ ಶಂಕಿತ ಉಗ್ರರನ್ನು ಬಂಧಿಸಿದ್ದು ಒಬ್ಬ ಜೈಲಿನಲ್ಲಿದ್ದರೆ ಮಾಸ್ಟರ್ ಮೈಂಡ್ ತಲೆಮರೆಸಿಕೊಂಡಿದ್ದಾನೆ.
ಬೆಂಗಳೂರಿನಲ್ಲಿ ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ತಪ್ಪಿಸಲಾಗಿದೆ. ಬಂಧಿತರಿಂದ ಏಳು ಪಿಸ್ತೂಲ್ 45 ಮದ್ದು ಗುಂಡುಗಳು, ಹನ್ನೆರಡು ಬೇಸಿಕ್ ಸೆಟ್ ಮೊಬೈಲ್ ಫೋನ್, ಡ್ರ್ಯ್ಯಾಗರ್, ವಾಕಿ ಟಾಕಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರು ಬೆಂಗಳೂರು ನಗರದಲ್ಲಿ ಕೃತ್ಯವೆಸಗಲು ಪ್ಲ್ಯಾನ್ ಮಾಡಿದ್ದರು. ವಿದೇಶದಿಂದ ವಿಧ್ವಂಸಕ ಕೃತ್ಯ್ಕಕೆ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಇಂಚಿಂಚು ಮಾಹಿತಿಯನ್ನು ಇಂದು ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಬಿಚ್ಚಿಟ್ಟರು. ಅಪಾರ ಪ್ರಮಾಣದ ಸ್ಫೋಟಕಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ 5 ಶಂಕಿತ ಉಗ್ರರನ್ನು ಬಂಧಿಸಿದೆ. ಅವರನ್ನು ಸೈಯದ್ ಸುಹೇಲ್, ಉಮರ್, ಜಾನಿದ್, ಮುದಾಸಿರ್ ಮತ್ತು ಜಾಹಿದ್ ಎಂದು ಗುರುತಿಸಲಾಗಿದ್ದು, ಈ ತಂಡ ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸಿತ್ತು ಎಂದು ಶಂಕಿಸಲಾಗಿದೆ. ಈ ಐವರೂ 2017ರ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಅವರು ಉಗ್ರರ ಸಂಪರ್ಕಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ದಯಾನಂದ ಸುದ್ದಿಗಾರರಿಗೆ ತಿಳಿಸಿದರು.
ಜಮತ್ ಇ ಇಸ್ಲಾಮಿ ಸಂಘಟನೆಯ ಹ್ಯಾಂಡ್ಲರ್ಸ್ ಮೂಲಕ ತರಬೇತಿ ಪಡೆಯಲು ಶಂಕಿತರು ಸುಲ್ತಾನ್ ಪಾಳ್ಯದಲ್ಲಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದರು. ಸುಲ್ತಾನ್ ಪಾಳ್ಯದ ಮಸೀದಿಯೊಂದರ ಪಕ್ಕದಲ್ಲಿಯೇ ವಾಸವಿದ್ದು ವಿಧ್ವಂಸಕ ಕೃತ್ಯಕ್ಕೆ ನಡೆಸಬೇಕಾದ ಬಗ್ಗೆ ಪ್ಲಾನಿಂಗ್ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಆರೋಪಿಗಳು ಕೊಲೆ, ದರೋಡೆ, ಕೆಂಪು ಮರಳು ಕಳ್ಳಸಾಗಣೆ ಮತ್ತು ಇತರ ಅಪರಾಧಗಳ ಆರೋಪಿಗಳಾಗಿದ್ದಾರೆ. ಅವರು ಜೈಲಿನಲ್ಲಿದ್ದ ಇತರ ಭಯೋತ್ಪಾದಕ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದರು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಜತೆ ನಜೀರ್ ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ನಜೀರ್ ಗ್ಯಾಂಗ್ ಸದಸ್ಯರು ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಯೋಜಿಸುತ್ತಿದ್ದಾರೆ. ಐವರು ಶಂಕಿತರು ನಗರದ ಸುಲ್ತಾನಪಾಳ್ಯ ಪ್ರದೇಶದ ಕನಕನಗರ ಪ್ರದೇಶದ ಪೂಜಾ ಸ್ಥಳದ ಬಳಿ ದೊಡ್ಡ ಸಂಚು ರೂಪಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದರು. ವಿದೇಶದಲ್ಲಿ ನೆಲೆಸಿರುವ ಮತ್ತೊಬ್ಬ ಕಿಂಗ್‌ಪಿನ್ ತನ್ನ ವ್ಯಾಪಾರ ಪ್ರತಿಸ್ಪರ್ಧಿ ನೂರ್ ಅಹ್ಮದ್‌ನನ್ನು 2017 ರಲ್ಲಿ ಕೊಂದ ಆರೋಪಿಯಾಗಿದ್ದು, ಈ ಪ್ರಕರಣದಲ್ಲಿ 21 ಮಂದಿಯನ್ನು ಬಂಧಿಸಲಾಗಿದೆ ಎಂದು ದಯಾನಂದ ತಿಳಿಸಿದರು.
ಆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ 21 ಮಂದಿಯಲ್ಲಿ ಐವರು ಶಂಕಿತರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
