ಬೆಂಗಳೂರು:
ನಟ ಮಡೆನೂರು ಮನುಗೆ ಬಿಗ್ ರಿಲೀಫ್ ಸಿಕ್ಕಿದೆ. ಕನ್ನಡ ಚಿತ್ರರಂಗದಿಂದ ವಿಧಿಸಿದ್ದ ನಿಷೇಧವನ್ನು ಫಿಲ್ಮ್ ಚೇಂಬರ್ ತೆರವು ಮಾಡಿದೆ. ಅತ್ಯಾಚಾರ ಆರೋಪ ಪ್ರಕರಣ ಹಾಗೂ ದರ್ಶನ್, ಶಿವಣ್ಣ, ಧ್ರುವ ಸರ್ಜಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದಲ್ಲಿ ಮಡೆನೂರು ಮನು ಅವರನ್ನು ಕನ್ನಡ ಕಿರುತೆರೆ, ಹಿರಿ ತೆರೆ ಚಟುವಟಿಕೆಗಳಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬ್ಯಾನ್ ಮಾಡಿತ್ತು. ಇದೀಗ ನಟನ ಮೇಲೆ ವಿಧಿಸಿದ್ದ ನಿಷೇಧ ತೆರವುಗೊಂಡಿದೆ.
ಶಿವಣ್ಣ, ದರ್ಶನ್, ಧ್ರುವ ಸರ್ಜಾ ಅವರಿಗೆ ಕ್ಷಮೆಯಾಚಿಸಿ ಪತ್ರ ಬರೆದಿದ್ದ ಮನು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದಾರೆ. ಸದ್ಯ ಮಡೆನೂರು ಮನವಿ ಪತ್ರವನ್ನು ಉಮೇಶ್ ಬಣಕಾರ್ ಸ್ವೀಕರಿಸಿದ್ದಾರೆ.ಈಗಾಗಲೇ ಮನು ಬಹಿರಂಗವಾಗಿ ಮೂವರು ಸ್ಟಾರ್ಸ್ಗೆ ಕ್ಷಮೆ ಕೇಳಿದ್ದಾರೆ. ಹೀಗಾಗಿ ಅವರಿಗೆ ಒಂದು ಅವಕಾಶ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ಉತ್ತಮ ನಟನಾಗಿ ಕನ್ನಡ ಚಿತ್ರರಂಗದ ಹೆಸರು ಕಾಪಾಡಿ ಎಂದು ಮನುಗೆ ಉಮೇಶ್ ಬಣಕಾರ್ ಬುದ್ಧಿವಾದ ಹೇಳಿದ್ದಾರೆ.
ಸ್ಟಾರ್ ನಟರ ವಿರುದ್ಧ ಹೀನವಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಮನು ವಿರುದ್ಧ ಹಲವು ದೂರು ದಾಖಲಾಗಿದ್ದವು. ಅಲ್ಲದೇ ಇತ್ತೀಚೆಗಷ್ಟೇ ಶಿವಣ್ಣನ ದರ್ಶನ ಸಿಗದೇ ನಿರಾಸೆಯಿಂದ ವಿಡಿಯೋ ಮೂಲಕ ಶಿವಣ್ಣನಿಗೆ ಮನು ಕ್ಷಮೆ ಕೇಳಿದ್ದರು.ಇನ್ನು ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಇತ್ತೀಚೆಗೆ ಹೊರ ಬಂದ ಬಳಿಕ ಮಾತನಾಡಿದ್ದ ನಟ ಮನು, ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದರು. ‘ಆ ಆಡಿಯೋ ನನ್ನದಲ್ಲ. ನನ್ನ ಸಿನಿಮಾ ಬರುವ ಹೊತ್ತಲ್ಲೇ ಈ ಆಡಿಯೋ ಹರಿಬಿಟ್ಟು ನನ್ನ ಮೇಲೆ ಷಡ್ಯಂತ್ರ ಮಾಡಿದ್ದಾರೆ. ಶಿವಣ್ಣನ ದೊಡ್ಡವರು. ನಾನು ಅವರ ಬಗ್ಗೆ ಆ ರೀತಿ ಮಾತನಾಡಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ನಾನೇ ಖುದ್ದಾಗಿ ಶಿವಣ್ಣ ಅವರನ್ನು ಭೇಟಿಯಾಗಿ ಕ್ಷಮೆ ಕೇಳುತ್ತೇನೆ’ ಎಂದು ಮನು ಹೇಳಿದ್ದರು.
ಅಲ್ಲದೆ ಇತ್ತೀಚೆಗೆ ಎನ್.ಆರ್.ರಮೇಶ್ ಅವರನ್ನು ಭೇಟಿಯಾಗಿದ್ದ ಮನು ಮೂವರು ನಟರಿಗೆ ಕ್ಷಮೆಯಾಚಿಸಿದ್ದರು. ಕಲೆ ನಂಬಿ ಬಂದ ನನ್ನನ್ನು ಕ್ಷಮಿಸಿ ಎಂದು ಮನು ಬೇಡಿಕೊಂಡಿದ್ದರು. ನಾನು ಉದ್ದೇಶಪೂರ್ವಕವಾಗಿ ಆ ರೀತಿ ಮಾತನಾಡಿಲ್ಲ. ಇದೆಲ್ಲವೂ ಷಡ್ಯಂತ್ರ ಎಂದಿದ್ದರು.








