ಬೆಂಗಳೂರು:
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಜೆಡಿಎಸ್‌ನವರ ಆರೋಪಗಳಲ್ಲಿ ಹುರುಳಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಮಾಲಿನ್ಯ ಇಲಾಖೆಯ ಜೊತೆ ಮಾತನಾಡಿದ್ದೇನೆ. ಏನಾದರೂ ಉಲ್ಲಂಘನೆಯಾಗಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಕೊಡಿ ಎಂದು ಸೂಚಿಸಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಗ್‌ಬಾಸ್ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಈ ಪ್ರತಿಕ್ರಿಕೆ ನೀಡಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಲಿ ಈ ಕ್ರಮ ಕೈಗೊಂಡಿದ್ದಾರೆ. ನಾನು ಡಿಸಿ ಜೊತೆ ಮಾತನಾಡಿದೆ. ಅವರೇ ಸರಿ ಮಾಡಿಕೊಳ್ಳಲಿ, ನಮಗೆ ಎಂಟರ್ ಟೈನ್‌ಮೆಂಟ್ ಬೇಕು. ಮೊದಲು ನಾನೇ ಉದ್ಘಾಟನೆ ಕೂಡ ಮಾಡಿರೋದು. ಜನರಿಗೆ ಮನರಂಜನೆ ನೀಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿರುತ್ತಾರೆ. ಏನಾದ್ರೂ ತಪ್ಪಾಗಿದ್ದರೂ ಅವಕಾಶ ಕೊಡಲು ಹೇಳಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೆ ಫೋನ್ ಮಾಡಿದೆ. ಆಗಲೇ ನನಗೆ ವಿಷಯ ಗೊತ್ತಾಗಿದ್ದು, ಎಂಟರ್ ಟೈನ್ ಮೆಂಟ್ ನಮಗೆ ಬೇಕು ಎಂದರು.
ಜೆಡಿಎಸ್‌ನವರ ನಟ್ಟು ಬೋಲ್ಟ್ ಆರೋಪಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಅವರಿಗೆ ಶಕ್ತಿ ಬೇಕು ಎಂದಾಗ ನನ್ನ ಹೆಸರು ತೆಗೆದುಕೊಳ್ಳುತ್ತಾರೆ. ಜಾಲಿವುಡ್ ಸ್ಟುಡಿಯೋ ಉದ್ಘಾಟನೆಯನ್ನು ನಾನೇ ಮಾಡಿದ್ದೇನೆ. ಕುಮಾರಸ್ವಾಮಿಯಾದ್ರೂ ಆರೋಪ ಮಾಡಲಿ. ಮೇಲೆ ಇರುವವರನ್ನು ಕರಕೊಂಡು ಬಂದರೂ ನಾನು ತಲೆಕೆಡೆಸಿಕೊಳ್ಳುವುದಿಲ್ಲ. ನನ್ನ ಬಗ್ಗೆ ಮಾತನಾಡದೇ ಅವರಿಗೆ ನಿದ್ರೆ, ಶಕ್ತಿ ಎರಡೂ ಅವರಿಗೆ ಬರಲ್ಲ. ನಾವು ನಮ್ಮಡ್ಯೂಟಿ ಮಾಡಿದ್ದೇವೆ ಎಂದರು.
ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದನ್ನು ಪ್ರಶ್ನಿಸಿ ಇಂದು ಹೈಕೋರ್ಟಿಗೆ ಕಾರ್ಯಕ್ರಮದ ಆಯೋಜಕರು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇಂದೇ ತುರ್ತು ವಿಚಾರಣೆ ಮಾಡುವಂತೆ ಅರ್ಜಿದಾರರ ಪರವಾಗಿ ವಕೀಲರು ಮನವಿ ಮಾಡಿದ್ದಾರೆ. ಹಾಗಾಗಿ ಮಧ್ಯಾಹ್ನ 2:30ರ ನಂತರ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಜಾಲಿವುಡ್ ಸ್ಟುಡಿಯೋದಿಂದ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ನಿನ್ನೆ ಸಂಜೆ ಕಂದಾಯ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದರು. ಬಳಿಕ ಒಂದು ಗಂಟೆಗಳ ಒಳಗೆ ಸ್ಪರ್ಧಿಗಳಿಗೆ ಮನೆಯಿಂದ ಹೊರಗಡೆ ಹೋಗಲು ಅವಕಾಶ ನೀಡಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಇಂದು ಜಾಲಿವುಡ್ ಸ್ಟುಡಿಯೋಸ್ ರಿಟ್ ಅರ್ಜಿ ಸಲ್ಲಿಸಿದೆ.
ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಸಮಯದಲ್ಲಿ ಆದೇಶ ಹೊರಡಿಸಲಾಗಿದೆ. ತಮ್ಮ ಅಹವಾಲು ಆಲಿಸದೆ ತರಾತುರಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಅರ್ಜಿದಾರರ ವ್ಯವಹಾರಕ್ಕೆ ಹಾನಿ ಮಾಡುವ ಉದ್ದೇಶ ಇದರ ಹಿಂದಿದೆ ಎಂದು ಅರ್ಜಿಯಲ್ಲಿ ವೆಲ್ಸ್ ಸ್ಟುಡಿಯೋ ಆರೋಪಿಸಿದೆ.
