ಮತದಾನದ ಮಹತ್ವ : ಬಿಹಾರ ಚುನಾವಣೆ ಕಲಿಸಿದ ಪಾಠ

     ಬಿಹಾರಿ ಮತದಾರನನ್ನು ದಡ್ಡ, ಪೆದ್ದ, ಕೋಲೆ ಬಸವ, ಹಿಂಸೆಯನ್ನು ಪ್ರೋತ್ಸಾಹಿಸುವಾತ- ಹೀಗೆ ನಾನಾ ರೀತಿ ಬಣ್ಣಿಸುತ್ತಿದ್ದ ದೇಶದ ಒಟ್ಟಾರೆ ಮತದಾರರಿಗೆ ಬಿಹಾರಿಗೆ ಬುದ್ಧಿ ಕಲಿಸಿದ್ದಾನೆ.

     ಸ್ವತಂತ್ರ ಭಾರತದ ಐದು ದಶಕಗಳ ಇತಿಹಾಸದಲ್ಲಿ ಬಿಹಾರ ಚುನಾವಣೆ ಹಲವಾರು ದೃಷ್ಟಿಯಿಂದ ಮಹತ್ವದ್ದಾಗಿದೆ. ಇನ್ನು ಮುಂದೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಉಳಿದ ಮತದಾರರು ಬಿಹಾರ ಮತದಾರನನ್ನು ಮಾದರಿ ಎಂದು ಪರಿಗಣಿಸಿದಲ್ಲಿ ವಿಶೇಷವೇನಲ್ಲ.

ಯುವ ಮತದಾರರ ನಿರ್ಣಯ :

ಮುಖ್ಯವಾಗಿ ಬಿಹಾರ ಚುನಾವಣೆಯಿಂದ ಕಲಿಯಬಹುದಾದ ನೀತಿ ಪಾಠವೇನು?

     ಧ್ರುವೀಕರಣ ಎನ್ನಬಹುದಾದ ರೀತಿಯಲ್ಲಿ ಬಿಹಾರ ಮತದಾರನ ನಿರ್ಣಯ ಹೊರಬಿದ್ದಿದೆ. ಯುವ ಜನರಲ್ಲಿ ಬಹುತೇಕ ಮತದಾರರು ಬದಲಾವಣೆಗೆ ಓಗೊಟ್ಟಿದ್ದಾರೆ. ಹೊಸ ನೋಟ, ಹೊಸದೃಷ್ಟಿ, ಬದಲಾವಣೆ-ಇದು ಬಿಹಾರಿ ಯುವ ಮತದಾರರ ಸಂದೇಶವಾಗಿದೆ.
ಬೆಂಗಳೂರಿನ ವರದಿಗಾರರ ತಂಡ ಸಮೀಕ್ಷಿಸಿದಂತೆ ಮತದಾರರಲ್ಲಿ ಮೂರು ವರ್ಗ ಸ್ಪಷ್ಟವಾಗಿದೆ.

     ಯುವ ಮತದಾರರು, ಕ್ರಾಂತಿ ಅಥವಾ ದಂಗೆ ಎನ್ನುವ ಪ್ರಮಾಣದಲ್ಲಿ ರಾಷ್ಟ್ರೀಯ ಜನತಾದಳ ಯುವ ನಾಯಕ ತೇಜಸ್ವಿಯಾದವನನ್ನು ಬೆಂಬಲಿಸಿದ್ದಾರೆ. 75 ಕ್ಷೇತ್ರಗಳಲ್ಲಿ ಆತ ಸಾಧಿಸಿರುವ ವಿಜಯ ಇದರಿಂದ ಸ್ಪಷ್ಟವಾಗುತ್ತದೆ.

      ಎರಡನೆಯ ವರ್ಗ ತಟಸ್ಥರು, ಮುಖ್ಯಮಂತ್ರಿ ನಿತೀಶ ಕುಮಾರರ ಬೆಂಬಲಿಗರು. ನಿತೀಶರ ವೈಯಕ್ತಿಕ ಸಚ್ಚಾರಿತ್ರ್ಯವನ್ನು ನಂಬಿ ಪಕ್ಷಕ್ಕೆ ಅಲ್ಲದಿದ್ದರೂ ವ್ಯಕ್ತಿಗೆ ಓಟು ಹಾಕಿದವರು. ದೇಶದ ಇಂದಿನ ಹಲವಾರು ಮುಖ್ಮಮಂತ್ರಿಗಳಿಗೆ ಹೋಲಿಸಿದರೆ ಬಿಹಾರದ ಸಮಾಜವಾದಿ ಮುಖ್ಯಮಂತ್ರಿ ನಿತೀಶಕುಮಾರ ಸಾವಿರಪಾಲು ಯೋಗ್ಯ.

ಮೋದಿಯನ್ನೂ ಮೆಚ್ಚಿದ ಬಿಹಾರಿಗಳು :

    ಮೂರನೆಯದು:

      ಬಿಹಾರದ ಇಂದಿನ ಚುನಾವಣೆಯ ಹಿರಿತನ, ಪ್ರೇರಕ ಶಕ್ತಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನೇ ನಂಬಿದವರು. ಇವರನ್ನು ತಟಸ್ಥರು ಎಂದು ವರ್ಗೀಕರಣ ಮಾಡಿದರೂ ತಪ್ಪಿಲ್ಲ. ಚರಿತ್ರಹೀನ ರಾಜಕಾರಣಿಗಳು ಇದೀಗ ದೇಶದ ಚರಿತ್ರೆಯನ್ನೂ ತುಂಬಿಸಿದ್ದಾರೆ.

       ಅಧಿಕಾರಕ್ಕೆ ಬಂದ ಕೂಡಲೆ ಹಣ ಗಳಿಸುವ ದಂಧೆ ಹೆಚ್ಚುತ್ತಿದೆ. ಅಭಿವೃದ್ಧಿ ಸಂಘಟನೆಯನ್ನು ನಡೆಸಬೇಕಾದ ಮುಖ್ಯಮಂತ್ರಿ ಹಣ, ಜಾತಿ ಸಂಘಟನೆಗೆ ಆದ್ಯತೆ ಕೊಡುತ್ತಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಶ್ರೀರಾಮಚಂದ್ರನಂತೆ ಮರ್ಯಾದಾ ಪುರುಷೋತ್ತಮನಲ್ಲದಿದ್ದರೂ ನಂಬಿಕೆಗೆ ಅರ್ಹ ಎಂದು ಬಿಹಾರಿಗಳು ನಂಬಿದ್ದಾರೆ.

      ಇಂದಿನ ಬಿಹಾರದ ಚುನಾವಣೆ ಒಂದು ರೀತಿಯಲ್ಲಿ ಜನಸಾಮಾನ್ಯರು, ವಿಶೇಷವಾಗಿ ಮಹಿಳಾ ಮತದಾರರು ನರೇಂದ್ರ ಮೋದಿಯ ಪ್ರಧಾನ ಮಂತ್ರಿ ಸ್ಥಾನಕ್ಕೆ ಕೊಟ್ಟ ಆದರ್ಶ-ಗೌರವ ಎಂದರೆ ಉತ್ಪ್ರೇಕ್ಷೆಯಲ್ಲ.

     ಮೋದಿಯವರ ಜನಪ್ರಿಯತೆಯನ್ನು ಎಲ್ಲರೂ ಅನುಮೋದಿಸಿದ್ದಾರೆ ಎನ್ನುವುದು ಇದರ ಅರ್ಥವಲ್ಲ. ಹೆಚ್ಚು ಜನ ಮೋದಿಯ ನಾಯಕತ್ವದಲ್ಲಿ ದೇಶದ ಭವಿಷ್ಯ, ಪ್ರಗತಿ ಮತ್ತು ಏಳಿಗೆಯನ್ನು ನಂಬಿದ್ದಾರೆ ಎನ್ನುವುದು ಬಿಹಾರ ಮತದಾರ ಕಲಿಸಿದ ಪಾಠ.

-ಶೇಷಣ್ಣ

Recent Articles

spot_img

Related Stories

Share via
Copy link