ಬಿಹಾರ ಚುನಾವಣೆಗೆ ಕೇಂದ್ರದಿಂದ ಹೈ ಸೆಕ್ಯೂರಿಟಿ

ಪಟ್ನಾ: 

    2025ರ ಬಿಹಾರ ವಿಧಾನಸಭಾ ಚುನಾವಣೆಗೆ  ಭದ್ರತಾ ಸಿದ್ಧತೆ ತೀವ್ರಗೊಂಡಿದೆ. ಗೃಹ ಸಚಿವಾಲಯವು  50 ಸಾವಿರ ಸಿಬ್ಬಂದಿಯನ್ನು ಒಳಗೊಂಡ 500 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು  ಬಿಹಾರಕ್ಕೆ ಕಳುಹಿಸಲು ಆದೇಶಿಸಿದ್ದು ಅಕ್ಟೋಬರ್ 15ರ ವೇಳೆಗೆ ಕರ್ತವ್ಯಕ್ಕೆ ಹಾಜರಾಗಲಿವೆ. ಇದರೊಂದಿಗೆ, ಬಿಹಾರ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜನೆಗೊಂಡ ಕೇಂದ್ರ ಭದ್ರತಾ ಸಿಬ್ಬಂದಿಯ ಸಂಖ್ಯೆ ಸುಮಾರು 1 ಲಕ್ಷಕ್ಕೇರಿದೆ.

    243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆಗೆ ಈ ಬಾರಿ ಕೇವಲ ಎರಡು ಹಂತಗಳಲ್ಲಿ (ನವೆಂಬರ್ 6 ಮತ್ತು 11ರಂದು) ಚುನಾವಣೆ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯು ಹೆಚ್ಚು ಹಂತಗಳಲ್ಲಿ ನಡೆಯುತ್ತಿದ್ದರೆ, ಅಗತ್ಯಕ್ಕನುಗುಣವಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಬಹುದಿತ್ತು. ಆದರೆ, ಕೇವಲ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದು ಅನಿವಾರ್ಯವಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.‌ 

   ಸಿಆರ್‌‌ಪಿಎಫ್‌ನ 250 ತುಕುಡಿಗಳು, ಬಿಎಸ್‌ಎಫ್‌ 141, ಸಿಐಎಸ್ಎಫ್ 85, ಐಟಿಬಿಪಿಯ 75 ತುಗುಡಿಗಳು ಸೇರಿದಂತೆ ಎಸ್ಎಸ್‌ಬಿ ಹಾಗೂ ಆರ್‌ಪಿಎಫ್‌ನ 449 ತುಕುಡಿಗಳು ಬಿಹಾರ ಚುನಾವಣಾ ಕರ್ತವ್ಯಕ್ಕೆ ಹಾಜರಾಗಲಿದೆ. ದೊರೆತ ಮಾಹಿತಿ ಪ್ರಕಾರ, ಈ ಚುನಾವಣೆಗೆ ನಿಯೋಜನೆಗೊಂಡ ಭದ್ರತಾ ಪಡೆಗಳಲ್ಲಿ ಸಿಆರ್‌ಪಿಎಫ್‌ ತುಕುಡಿಗಳೇ ಹೆಚ್ಚಿನ ಪಾಲನ್ನು ಹೊಂದಿವೆ.

   ಸೂಕ್ಷ್ಮ, ಅತೀ ಸೂಕ್ಷ್ಮ, ಕೋಮು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳನ್ನೊಳಗೊಂಡ ಒಟ್ಟು 38 ಜಿಲ್ಲೆಗಳಿಗೆ ಈ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದ್ದು, ಭಾರತ ಚುನಾವಣಾ ಆಯೋಗ (ECI), ಗೃಹ ಸಚಿವಾಲಯ ಮತ್ತು ಬಿಹಾರ ಪೊಲೀಸರೊಂದಿಗೆ ಸಂಯೋಜನೆಯ ಕಾರ್ಯ ನಿರ್ವಹಿಸಲಿವೆ. ಕೆಲ ದಿನಗಳಲ್ಲಿ ವಿಶೇಷ ರೈಲುಗಳ ಮೂಲಕ ಈ ಭದ್ರತಾ ಪಡೆಗಳು ಬಿಹಾರಕ್ಕೆ ಬಂದಿಳಿಯಲಿವೆ.

   ಇನ್ನು ಎಲ್ಲ ಪಡೆಗಳಿಗೂ ಲಾಠಿ, ಶೀಲ್ಡ್, ಹೆಲ್ಮೆಟ್, ಬಾಡಿ ಪ್ರೊಟೆಕ್ಟರ್, ಅಶ್ರುವಾಯು ಗ್ರೇನೇಡ್‌ಗಳು, ರಬ್ಬರ್ ಬುಲೆಟ್‌ಗಳು ಸೇರಿದಂತೆ ಜನಸಂದಣಿ ನಿಯಂತ್ರಣಕ್ಕೆ ಬೇಕಾದ ಸಲಕರಣೆ ಒದಗಿಸಲಾಗಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಗಳ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.

   ಗೃಹ ಸಚಿವಾಲಯವ ಅಕ್ಟೋಬರ್ 8ರಂದು ಹೊರಡಿಸಿರುವ ಆದೇಶದ ಪ್ರಕಾರ, ಅಕ್ಟೋಬರ್ 15ರೊಳಗೆ ಎಲ್ಲಾ ಪಡೆಗಳು ನಿಯೋಜಿತ ಸ್ಥಳಗಳಲ್ಲಿ ಹಾಜರಿರಬೇಕು ಹಾಗೂ ಸಿಬ್ಬಂದಿಯನ್ನು ಸಂಯೋಜಿಸಲು ಅಧಿಕಾರಿಗಳಿಗೆ ಕೇವಲ ಐದು ದಿನಗಳ ಕಾಲಾವಕಾಶ ನೀಡಲಾಗಿದೆ. ಚುನಾವಣಾ ಕರ್ತವ್ಯಕ್ಕೆ ಬರುವ ಭದ್ರತಾ ಪಡೆಗಳಿಗೆ ಸಾರಿಗೆ, ವಸತಿ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಡುವ ಜವಾಬ್ದಾರಿಯನ್ನು ರಾಜ್ಯದ ಅಧಿಕಾರಿಗಳಿಗೆ ವಹಿಸಲಾಗಿದೆ. ಇದು ಇದೇ ಮೊದಲ ಬಾರಿಗೆ ರಾಜ್ಯ ಚುನಾವಣೆಯೊಂದಕ್ಕೆ ನೇಮಿಸಲಾದ ಅತಿದೊಡ್ಡ ಭದ್ರತಾ ನಿಯೋಜನೆಗಳಲ್ಲಿ ಒಂದಾಗಿದ್ದು, ಇಲ್ಲಿನ ರಾಜಕೀಯ ಗಂಭೀರತೆಗೆ ಸಾಕ್ಷಿಯಾಗಿದೆ.

Recent Articles

spot_img

Related Stories

Share via
Copy link