ಬೈಕ್‌ ಟ್ಯಾಕ್ಸಿ ಸೇವೆಗೆ ಕೇಂದ್ರ ಅಸ್ತು, ರಾಜ್ಯದಲ್ಲಿ ಈಗೇನಾಗುತ್ತೆ?

ನವದೆಹಲಿ :

     ಕೇಂದ್ರ ಸರ್ಕಾರವು ಬೈಕ್ ಟ್ಯಾಕ್ಸಿ ಸೇವೆಗೆ  ಅನುಮತಿ ನೀಡಿದ್ದು, ವಾಣಿಜ್ಯೇತರ ಖಾಸಗಿ ಬೈಕ್‌ಗಳನ್ನು ಬಳಸಿಕೊಂಡು ಅಗ್ರಿಗೇಟರ್‌ಗಳು ಬೈಕ್ ಟ್ಯಾಕ್ಸಿ ಸೇವೆ ನೀಡಬಹುದು. ಆದರೆ ಇದಕ್ಕೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯ ಎಂದು ಹೇಳಿದೆ. ಬೈಕ್ ಟ್ಯಾಕ್ಸಿ ಸೇವೆಗೆ ಕರ್ನಾಟಕ ರಾಜ್ಯ ಸರ್ಕಾರ ನಿಷೇಧ ಹೇರಿದ್ದು, ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದೇ ಹೊತ್ತಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಅದು ಮಂಗಳವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

     ಕೇಂದ್ರ ಸಾರಿಗೆ ಸಚಿವಾಲಯ ಮೋಟಾರು ವಾಹನ ಕಾಯ್ದೆ 1988ರ ಅಡಿಯ ಮೋಟಾರ್ ವಾಹನಗಳ ಅಗ್ರಿಗೇಟರ್ ಮಾರ್ಗಸೂಚಿ 2025 ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರಗಳು ಖಾಸಗಿ ಬೈಕುಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅಗ್ರಿಗೇಟರುಗಳಿಗೆ ಅನುಮತಿ ಕೊಡಬಹುದು ಎಂದು ಹೇಳಿದೆ. ಆದರೆ ಇದಕ್ಕೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯ ಎಂದಿರುವುದರಿಂದ, ಕರ್ನಾಟಕದಲ್ಲಿ ಈಗಾಗಲೇ ಜಾರಿಯಲ್ಲಿರುವ ಬೈಕ್‌ ಟ್ಯಾಕ್ಸಿ ನಿಷೇಧ ಮುಂದುವರಿಯಲಿದೆ.

     ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿರುವುದು ಇದೇ ಮೊದಲು. ಖಾಸಗಿ ವಾಹನ ಬಳಸಿ ಅಗ್ರಿಗೇಟರ್ ಗಳು ಸೇವೆ ನೀಡಬಹುದು. ಇದಕ್ಕೆ ದೈನಂದಿನ, ವಾರ, ಮಾಸಿಕ ಅವಧಿಗೆ ಸರ್ಕಾರ ಶುಲ್ಕ ವಿಧಿಸಬಹುದು. ಇದರಿಂದ ಸಂಚಾರದಟ್ಟಣೆ, ಮಾಲಿನ್ಯ ನಿಯಂತ್ರಣ, ಅಗ್ಗದ ಪ್ರಯಾಣ ಸಾಧ್ಯ. ಸ್ಥಳೀಯ ಸಾರಿಗೆ ಅಭಿವೃದ್ಧಿ, ಜೀವನ ರೂಪಿಸುವ ಅವಕಾಶ ಮಾಡಿಕೊಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

    ಕರ್ನಾಟಕದಲ್ಲಿ ಓಲಾ , ಉಬರ್‌ , ರ‍್ಯಾಪಿಡೊ  ಬೈಕ್‌ ಟ್ಯಾಕ್ಸಿ ಸೇವೆಗಳು ಸ್ಥಗಿತಗೊಂಡಿವೆ. ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಕೆಗೆ ಪೂರಕವಾದ ಮಧ್ಯಂತರ ಪರಿಹಾರ ನೀಡಲು ಹೈಕೋರ್ಟ್‌ ನ್ಯಾಯಪೀಠ ನಿರಾಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ಬಂದ್ ಆಗಿದೆ. ಈ ಕುರಿತು ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್‌ ವಿಭಾಗೀಯ ಪೀಠ ಜೂನ್‌ 24ಕ್ಕೆ ನಿಗದಿ ಪಡಿಸಿದೆ.

Recent Articles

spot_img

Related Stories

Share via
Copy link