ಬಯೋ ವಾರ್‌ಗೆ ಉಗ್ರರ ಸಂಚು-ಏನಿದು ರಿಸಿನ್‌ ಪಾಯ್ಸನ್‌?

ನವದೆಹಲಿ:

     ಇಷ್ಟು ದಿನ ಬಾಂಬ್‌ ಸ್ಫೋಟ, ಡೆಡ್ಲಿ ಅಟ್ಯಾಕ್‌ಗಳ ಮೂಲಕ ದಾಳಿ ನಡೆಸುತ್ತಿದ್ದ ಉಗ್ರರು ಇದೀಗ ಮತ್ತೊಂದು ರೂಪದ ದಾಳಿ ನಡೆಸಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವುದು ಬಯಲಿಗೆ ಬಂದಿದೆ. ದೇಶದಲ್ಲಿ ಅಪೈಕಾರಿ ಕೆಮಿಕಲ್‌ಗಳನ್ನು ಬಳಸಿ ಉಗ್ರರು ಬಯೋ ವಾರ್‌ಗೆ ಮುಂದಾಗಿರುವ ಆಘಾತಕಾರಿ ಸಂಗತಿಯೊಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ  ಗೆ ಸಂಬಂಧಿಸಿದ ಶಂಕಿತ ಭಯೋತ್ಪಾದಕ ಯೋಜನೆಯ ಭಾಗವಾಗಿ, ಅತ್ಯಂತ ಮಾರಕ ರಾಸಾಯನಿಕ ವಿಷವಾದ ರಿಸಿನ್ ಅನ್ನು ತಯಾರಿಸಿದ ಆರೋಪದ ಮೇಲೆ ಚೀನಾದಿಂದ ವೈದ್ಯಕೀಯ ಪದವಿ ಪಡೆದ ವೈದ್ಯನನ್ನು ATS ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಇಬ್ಬರನ್ನು ಸಹ ಬಂಧಿಸಲಾಗಿದ್ದು, ಈ ಉಗ್ರರು ಫುಡ್‌ಸ್ಟ್ರೀಟ್‌ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿಗೆ ಮುಂದಾಗಿದ್ದರು ಎನ್ನಲಾಗಿದೆ.

    ATS ಅಧಿಕಾರಿಗಳ ಪ್ರಕಾರ ಬಂಧಿತ ಆರೋಪಿಗಳನ್ನು ಡಾ. ಅಹ್ಮದ್ ಮೊಹಿಯುದ್ದೀನ್ ಸಯ್ಯದ್, ಆಜಾದ್ ಸುಲೇಮಾನ್ ಶೇಖ್ ಮತ್ತು ಮೊಹಮ್ಮದ್ ಸುಹೇಲ್ ಮೊಹಮ್ಮದ್ ಸಲೀಮ್ ಎಂದು ಗುರುತಿಸಲಾಗಿದೆ. ಈ ಮೂವರು ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಯಲ್ಲಿ ರಿಸಿನ್ ಅನ್ನು ಬಳಸಲು ಯೋಜಿಸುತ್ತಿದ್ದರು. ಈಗಾಗಲೇ ಆಹಾರ ಮಾರುಕಟ್ಟೆಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಸ್ಥಳಾನ್ವೇಷಣೆಯನ್ನೂ ನಡೆಸಿದ್ದರು ಎನ್ನಲಾಗಿದೆ.

    ಡಾ. ಅಹ್ಮದ್ ಮೊಹಿಯುದ್ದೀನ್ ಸಯ್ಯದ್ ಹೆಚ್ಚು ವಿದ್ಯಾವಂತ ಮತ್ತು ಮೂಲಭೂತವಾದಿ. ಈತ ಪ್ರಮುಖ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಪಿತೂರಿಯ ಭಾಗವಾಗಿ ಹಣವನ್ನು ಸಂಗ್ರಹಿಸಲು ಮತ್ತು ಯುವಕರನ್ನು ನೇಮಿಸಿಕೊಳ್ಳುತ್ತಿದ್ದ ಎಂದು ಗುಜರಾತ್ ATS ಡಿಐಜಿ ಸುನಿಲ್ ಜೋಶಿ ಹೇಳಿದರು. ಐಎಸ್‌ಕೆಪಿ ಜೊತೆ ಸಂಬಂಧ ಹೊಂದಿರುವ ಅಫ್ಘಾನಿಸ್ತಾನ ಮೂಲದ ಕಾರ್ಯಕರ್ತ ಅಬು ಖಾದಿಜಾ, ಪಾಕಿಸ್ತಾನ ಗಡಿಯುದ್ದಕ್ಕೂ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳ ಪೂರೈಕೆ ಮಾಡಲು ಸೈಯದ್‌ಗೆ ನಿರ್ದೇಶನ ನೀಡುತ್ತಿದ್ದ ಮತ್ತು ಅದಕ್ಕೆ ಬೇಕಾಗಿದ್ದ ಎಲ್ಲಾ ಅನುಕೂಲ ಮಾಡಿಕೊಡುತ್ತಿದ್ದ ಎನ್ನಲಾಗಿದೆ. 

    ಹೈದರಾಬಾದ್ ಮೂಲದ ಡಾ. ಸೈಯದ್ ನವೆಂಬರ್ 7 ರಂದು ಗಾಂಧಿನಗರದ ಅದಲಾಜ್ ಬಳಿ ಬಂಧಿಸಲಾಗಿದೆ ಎಂದು ಎಟಿಎಸ್ ತಿಳಿಸಿದೆ. ಅಧಿಕಾರಿಗಳು ಎರಡು ಗ್ಲಾಕ್ ಪಿಸ್ತೂಲ್‌ಗಳು, ಒಂದು ಬೆರೆಟ್ಟಾ ಪಿಸ್ತೂಲ್, 30 ಲೈವ್ ಕಾರ್ಟ್ರಿಡ್ಜ್‌ಗಳು ಮತ್ತು ರಿಸಿನ್ ಉತ್ಪಾದನೆಯಲ್ಲಿ ಬಳಸುವ ಪ್ರಮುಖ ಅಂಶವಾದ ನಾಲ್ಕು ಲೀಟರ್ ಕ್ಯಾಸ್ಟರ್ ಆಯಿಲ್ ಅನ್ನು ಅವನ ಬಳಿಯಿಂದ ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಮೂರು ಮೊಬೈಲ್ ಫೋನ್‌ಗಳು ಮತ್ತು ಎರಡು ಲ್ಯಾಪ್‌ಟಾಪ್‌ಗಳನ್ನು ಸೀಜ್‌ ಮಾಡಿದ್ದಾರೆ. ಇನ್ನು ಆರೋಪಿಗಳು ಅಗತ್ಯ ರಾಸಾಯನಿಕಗಳು ಮತ್ತು ಉಪಕರಣಗಳನ್ನು ಖರೀದಿಸಿ ಈಗಾಗಲೇ ಈ ವಿಷಕಾರಿ ರಾಸಾಯನಿಕದ ಪ್ರಾಥಮಿಕ ಸಂಸ್ಕರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. 

   ರಿಸಿನ್ ಒಂದು ಜೈವಿಕ ವಿಷವಾಗಿದ್ದು, ಇದನ್ನು ಕ್ಯಾಸ್ಟರ್ ಬೀನ್ಸ್(ಹರಳೆಣ್ಣೆ ಬೀಜ) ಸಂಸ್ಕರಿಸಿದ ನಂತರ ಉಳಿದಿರುವ ತ್ಯಾಜ್ಯ ವಸ್ತುಗಳಿಂದ ಉತ್ಪಾದಿಸಲಾಗುತ್ತದೆ. ಇದು ಇದು ಹೆಚ್ಚು ವಿಷಕಾರಿ ವಸ್ತುವಾಗಿದ್ದು, ತಪ್ಪಾಗಿ ಬಳಸಿದರೆ ಅಥವಾ ಜನರಿಗೆ ಹಾನಿ ಮಾಡಲು ಬಳಸಿದರೆ ಗಂಭೀರ ಅನಾರೋಗ್ಯ ಸಮಸ್ಯೆ ಅಥವಾ ಸಾವಿಗೆ ಕಾರಣವಾಗಬಹುದು. 

    ಈ ರಿಸಿನ್‌ ವಿಷವನ್ನು ಸಣ್ಣ ಪ್ರಮಾಣದಲ್ಲೂ ಉಸಿರಾಡಿದರೆ, ಸೇವಿಸಿದರೆ ಅಥವಾ ಯಾವುದೇ ರೀತಿಯಲ್ಲಾದರೂ ದೇಹಕ್ಕೆ ಸೇರಿದರೆ ಹೆಚ್ಚು ವಿಷಕಾರಿಯಾಗಿರುತ್ತದೆ. ಈ ವಿಷ ಪದಾರ್ಥ ದೇಹಕ್ಕೆ ಸೇರಿದರೆ ತೀವ್ರ ಅಂಗಾಂಗಗಳು ವೈಫಲ್ಯಗೊಂಡು ಮನುಷ್ಯರು ಸಾವನ್ನಪ್ಪುವ ಸಾಧ್ಯತೆ ಇದೆ. ಇದಕ್ಕೆ ಪ್ರತಿಯಾಗಿ ವೈದ್ಯಲೋಕದಲ್ಲಿ ಯಾವುದೇ ಔಷಧಿ ಇಲ್ಲ. ಹಾಗಾಗಿ ಈ ರಾಸಾಯನಿಕ ವಸ್ತು ಬಳಕೆ ಮತ್ತ ತಯಾರಿಕೆ ಕಾನೂನಾತ್ಮಕವಾಗಿ ಅಪರಾಧವಾಗಿದೆ.

    ವಿಧಿವಿಜ್ಞಾನ ಮತ್ತು ಸಾರ್ವಜನಿಕ-ಆರೋಗ್ಯ ಪ್ರಯೋಗಾಲಯಗಳು ರಿಸಿನ್ ಅನ್ನು ಪತ್ತೆಹಚ್ಚಲು ಮತ್ತು ದೃಢೀಕರಿಸಲು ವಿಶೇಷ ಪರೀಕ್ಷೆಗಳನ್ನು ಬಳಸುತ್ತವೆ; ಇವು ತಾಂತ್ರಿಕ, ನಿಯಂತ್ರಿತ ಪರೀಕ್ಷೆಗಳು ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಮಾತ್ರ ನಡೆಯುತ್ತವೆ. ಪೊಲೀಸರು, ಭಯೋತ್ಪಾದನಾ ನಿಗ್ರಹ ಘಟಕಗಳು, ವಿಧಿವಿಜ್ಞಾನ ಪ್ರಯೋಗಾಲಯಗಳು ಮತ್ತು ಸಾರ್ವಜನಿಕ-ಆರೋಗ್ಯ ಅಧಿಕಾರಿಗಳು ಮಾತ್ರ ಇದರ ಪ್ರಯೋಗ ನಡೆಸಬಹುದಾಗಿದೆ. ಹಾನಿಕಾರಕ ಉದ್ದೇಶಗಳಿಗಾಗಿ ರಿಸಿನ್ ಅನ್ನು ಹೊಂದಿರುವುದು, ತಯಾರಿಸುವುದು ಅಥವಾ ಬಳಸುವುದು ಗಂಭೀರ ಅಪರಾಧವಾಗಿದೆ. ಅಲ್ಲದೇ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗುತ್ತದೆ.

Recent Articles

spot_img

Related Stories

Share via
Copy link