ಮೈಸೂರು:
ಮಂಡ್ಯ ಜಿಲ್ಲೆಯ ನಾಗಮಂಗಲದ ಗಣೇಶ ಮೆರವಣಿಗೆ ವೇಳೆ ನಡೆದ ಕೋಮು ಘರ್ಷಣೆ ಹಾಗೂ ಕಲ್ಲು ತೂರಾಟಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಆರೋಪಿಸಿದ್ದಾರೆ.ಮಂಡ್ಯ ಜಿಲ್ಲೆಗೆ ಗುರುವಾರ ಭೇಟಿ ನೀಡಿದ ಅವರು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ನಾಗಮಂಗಲದಲ್ಲಿ ನಡೆದ ಘಟನೆಗಳನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ಗೆ ಪೆಟ್ರೋಲ್ ಬಾಂಬ್ ಕೂಡ ಒಂದು ಸಣ್ಣ ಘಟನೆಯಾಗಿದೆ. ಬಹುಶಃ ಅವರಿಗೆ ಕ್ಷಿಪಣಿ ಅಥವಾ ರಾಕೆಟ್ ಒಂದು ದೊಡ್ಡ ಘಟನೆಯಂತೆ ಕಾಣಿಸಬಹುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಇಂತಹ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದ ಅಶೋಕ್ ಅವರು, ನಾಗಮಂಗಲ ಘಟನೆ ಪೂರ್ವಯೋಜಿತ ಎಂದು ಕಿಡಿಕಾರಿದರು. ಇದೇ ವೇಳೆ ಕಳೆದ ವರ್ಷದ ನಡೆದ ಘಟನೆಯನ್ನು ಅಶೋಕ್ ಅವರು ಸ್ಮರಿಸಿದ್ದು, ಅಧಿಕಾರಿಗಳು ಹಾಗೂ ಪೊಲೀಸರ ಸನ್ನದ್ಧತೆ ಕುರಿತು ಪ್ರಶ್ನಿಸಿದರು.
ಭಯೋತ್ಪಾದನ ಕೃತ್ಯವು ಈ ರೀತಿ ನಡೆಯಲ್ಲ. ಕಾನೂನುನನ್ನ ಕೈಗೆತ್ತುಕೊಂಡಿದ್ದಾರೆ. ಕಳೆದ ಬಾರಿಯೂ ಗಣಪತಿ ವಿಚಾರಕ್ಕೆ ಗಲಾಟೆಯಾಗಿದೆ. ಅಧಿಕಾರಿಗಳಿಗೆ, ಪೊಲೀಸರಿಗೆ ಅಷ್ಟೂ ಪರಿಜ್ಞಾನವು ಇಲ್ವಾ. ಕತ್ತೆ ಕಾಯ್ತಿದ್ರಾ ಪೊಲೀಸರು? ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾನೂನು ಹಾಗೂ ಸರ್ಕಾರ ನಮಗೆ ಏನೂ ಮಾಡಲ್ಲ ಎಂದು ಅವರ ತಲೆಗೆ ಬಂದಿದೆ. ಮಚ್ಚು ಲಾಂಗ್ ತಕೊಂಡು ಶಿವಮೊಗ್ಗದಲ್ಲಿ ಓಡಾಡಿದ್ದರು. ಆದರೆ, ಅವರಿಗೆ ಏನು ಮಾಡಲಿಲ್ಲ. ಇದೆಲ್ಲ ಕಾಂಗ್ರೆಸ್ಸಿನ ಪ್ರಚೋದನೆ ಇಲ್ಲದೆ ನಡೆಯಲು ಸಾಧ್ಯವಿಲ್ಲ.
ಕೆರಗೋಡಿನಲ್ಲಿ ಏಕಾಏಕಿ ಹನುಮ ಧ್ವಜ ಇಳಿಸಿದರು. ಬಳಿಕ ರಾಜ್ಯ ಪೂರ್ತಿ ಹನುಮ ಧ್ವಜ ಇಳಿದರು. ಕಾಂಗ್ರೆಸ್ ಹನುಮನನ್ನ ವಿಲನ್ ಮಾಡಿ ಆಯಿತು. ಇದೀಗ ಗಣೇಶನ ಕಂಡರೂ ಕಾಂಗ್ರೆಸ್ ನವರಿಗೆ ಆಗಲ್ಲ. ಗಣೇಶನ ಮೇಲೆ ಕಾಂಗ್ರೆಸ್ ವಕ್ರದೃಷ್ಟಿ ಬೀರಿದೆ. ಕಾಂಗ್ರೆಸ್ ಸರ್ಕಾರ ಸರ್ವನಾಶವಾಗುತ್ತೆ. ಗೃಹ ಸಚಿವರು ಇದನ್ನು ಸಣ್ಣ ಘಟನೆ ಎಂದು ಹೇಳಿದ್ದಾರೆ. ಪೆಟ್ರೋಲ್ ಬಾಂಬ್ ಹಾಕಿರೋದು ಅವರಿಗೆ ಸಣ್ಣ ಘಟನೆಯಾಗಿದೆ. ಮಿಸೆಲ್, ರಾಕೇಟ್ ಹಾಕಿದ್ರೆ ಅವರಿಗೆ ದೊಡ್ಡ ಘಟನೆ. ಇದು ಪೂರ್ವ ನಿಯೋಜಿತ ಘಟನೆ. ಮಸೀದಿಯಲ್ಲಿ ಪ್ಲಾನ್ ಮಾಡಿ ಗಲಭೆ ಏಳಿಸಿದ್ದಾರೆ. ಮಂಡ್ಯದಲ್ಲಿ ಗಣಪತಿ ಹಬ್ಬ ನಡೆಯಬಾರದು ಎಂದು ಪ್ಲಾನ್. ಕುತಂತ್ರ ಮಾಡಿ ಈ ಕೃತ್ಯ ಮಾಡಿದ್ದಾರೆ. ಹಲ್ಲೆ ಮಾಡಿದ್ದು ಮುಸ್ಲಿಂ ಟೆರೆರಿಸ್ಟ್ ಗಳು, ರೌಡಿಗಳು. ಈ ಕೃತ್ಯದಲ್ಲಿ ಅಂಗಡಿ-ಮುಂಗಟ್ಟು ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರ ರಕ್ಷಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಗಣೇಶ ಮೂರ್ತಿ ಮೆರವಣಿಗೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು, ಗಾಜಿನ ಬಾಟಲ್ ತೂರಿ ಪೆಟ್ರೋಲ್ ಬಾಂಬ್ ಎಸೆದಿರುವುದು, ತಲವಾರ್‌ಗಳನ್ನು ತಂದು ರಸ್ತೆಯಲ್ಲಿ ಹಲ್ಲೆ ನಡೆಸಲು ಯತ್ನ ನಡೆಸಿರುವುದು ದೇಶದ್ರೋಹಿಗಳ ಪೂರ್ವನಿಯೋಜಿತ ಕೃತ್ಯ. ಇಷ್ಟಾದರೂ ಕೂಡ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಪೊಲೀಸರು ಮೂಕ ಪ್ರೇಕ್ಷಕರಾಗಿ ಎಲ್ಲವನ್ನೂ ನೋಡುತ್ತಿದ್ದಾರೆಂದರೆ ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಈ ಹಿಂದೆ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸುವ ಕೆಲಸ ಮಾಡಿದರು. ರಾಜ್ಯದಲ್ಲಿರುವ ಹಿಂದೂ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡವಳಿಕೆಯ ಪರಿಣಾಮವಾಗಿ ದೇಶದ್ರೋಹಿಗಳು ಇಂತಹ ಅಟ್ಟಹಾಸಕ್ಕೆ ಕೈ ಹಾಕುತ್ತಿದ್ದಾರೆ. ರೈತರ ಹೋರಾಟಕ್ಕೆ ದೇಶಾದ್ಯಂತ ಹೆಸರಾಗಿರುವ ಮಂಡ್ಯ ಜಿಲ್ಲೆ ಕೋಮುಗಲಭೆ ವಿಚಾರದಲ್ಲಿ ರಾಷ್ಟ್ರದೆಲ್ಲೆಡೆ ಚರ್ಚೆಯಾಗುತ್ತಿರುವುದು ದುರಾದೃಷ್ಟ. ಗಲಭೆಯಲ್ಲಿ ನಷ್ಟವಾಗಿರುವ ಆಸ್ತಿ ಪಾಸ್ತಿಗಳ ಸಂಪೂರ್ಣ ವೆಚ್ಚದ ಪರಿಹಾರವನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಭರಿಸಿಕೊಡಬೇಕೆಂದು ಆಗ್ರಹಿಸಿದರು.
ಮಾಜಿ ಸಚಿವ ಹಾಗೂ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಅವರು ಮಾತನಾಡಿ, ಪೆಟ್ರೋಲ್ ಬಾಂಬ್ ಸ್ಫೋಟದಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು, ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ. ಇದರಿಂದ ಕೋಟಿಗಟ್ಟಲೆ ನಷ್ಟ ಉಂಟಾಗಿದೆ. ಇಂತಹ ದುಷ್ಕೃತ್ಯ ಎಸಗುವವರಿಗೆ ಕಾಂಗ್ರೆಸ್ ಸರಕಾರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಬಳಿಕ ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸುವಂತೆ ಆಗ್ರಹಿಸಿದ ಅವರು, ದಾಳಿಗಳು ಪೂರ್ವಯೋಜಿತವಾಗಿದ್ದು, ಮಸೀದಿಗಳಲ್ಲಿ ಪೆಟ್ರೋಲ್ ಬಾಂಬ್ ಮತ್ತು ಕಲ್ಲುಗಳನ್ನು ಸಂಗ್ರಹಿಸಲಾಗಿದೆ ಎಂದು ಆರೋಪಿಸಿದರು.