ಬಿಜೆಪಿಯ ವೈಫಲ್ಯಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ : ಡಿ ಕೆ ಶಿ

ಬೆಳಗಾವಿ:

      ಬಿಜೆಪಿಯ ವೈಫಲ್ಯಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. 2013-18ರಲ್ಲಿ ನಮ್ಮ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸಿದ್ದೆವು. ಬಿಜೆಪಿ ಅಧಿಕಾರವಧಿಯಲ್ಲಿ ಉತ್ಪಾದನೆ ಹೆಚ್ಚಿಸದ ಕಾರಣ ಈಗ ಸಮಸ್ಯೆ ಉದ್ಭವಿಸಿದೆ. ಅಧಿಕಾರಕ್ಕೆ ಬಂದ ತಕ್ಷಣವೇ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಕುರಿತು ಚರ್ಚಿಸಿದ್ದೇನೆ. ಪಾವಗಡ ಸೋಲಾರ್ ಪಾರ್ಕ್ ಗೆ ಭೇಟಿ ನೀಡಿದ್ದೆವು. ಈಗ ಹೊಸ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದ್ದೇವೆಂದು ಹೇಳಿದರು.

     ರಾಜ್ಯದಲ್ಲಿ ಈ ವರ್ಷ ಕಡಿಮೆ ಮಳೆಯಾಗಿದ್ದು, ಒಂದು ದಿನ ಮಳೆಯಾಗದಿದ್ದರೆ ಸರ್ಕಾರಕ್ಕೆ 1000 ಕೋಟಿ ರೂಪಾಯಿ ನಷ್ಟವಾಗುತ್ತದೆ. ಒಂದು ಘಟಕಕ್ಕೆ 6 ರಿಂದ 7 ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಖರೀದಿಸಿ ಸಬ್ಸಿಡಿಯಲ್ಲಿ ರೈತರಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

 
    ಎತ್ತಿನಹೊಳೆಯಿಂದ ನೀರು ತರುತ್ತಿದ್ದು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಎಲ್ಲಾ ಭಾಗಕ್ಕೂ ನೀರು ತಲುಪಬೇಕು ಎಂದರೆ ಮಧ್ಯದಲ್ಲಿ ಪಂಪ್ ಹಾಕಿ ನೀರು ಬಳಸುವುದನ್ನು ತಪ್ಪಿಸಬೇಕು. ಇದಕ್ಕೆ ಸೂಕ್ತ ಕಾನೂನು ತರಬೇಕು.
    ವಾಲ್ಮಿ ತರಬೇತಿಗೆ ಧಾರವಾಡಕ್ಕೆ ಹೋಗಬೇಕಾಗಿದೆ. ರಾಜ್ಯದ ಆಯಾ ಭಾಗಗಳಲ್ಲಿ ವಾಲ್ಮಿ ತರಬೇತಿ ಕೇಂದ್ರಗಳನ್ನು ಆರಂಭಿಸಿ ಅಲ್ಲೇ ತರಬೇತಿ ನೀಡುವ ಬಗ್ಗೆ ಚರ್ಚೆ ನಡೆಸಿದ್ದೇನೆ. ಅತ್ಯಂತ ದಕ್ಷ ಅಧಿಕಾರಿಗಳು ಈ ಭಾಗದಲ್ಲಿದ್ದಾರೆ. ಅವರೇ ರೈತರ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದರು. ರೈತರ ಬಗ್ಗೆ ಹೆಚ್ಚು ಕಾಳಜಿಯಿದೆ ಅವರಿಗೆ.
 
    ಆದ ಕಾರಣ ಕಾಲುವೆಯಿಂದ ನೀರು ತೆಗೆಯುವವರಿಗೆ ಇಂತಿಷ್ಟು ಶುಲ್ಕ ಎಂದು ವಿಧಿಸುವ ಮಹಾರಾಷ್ಟ್ರ ಮಾದರಿ ಅಧ್ಯಯನ ಮಾಡಲು ಸೂಚನೆ ನೀಡಿದ್ದೇನೆ ಎಂದರು.ಪಂಪ್ ಮಾಡಿ ನೀರು ತುಂಬಿಸುವ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಟೆಂಡರ್ ಕರೆಯಬೇಕು ಎಂದು ಸೂಚನೆ ನೀಡಿದ್ದು, ಈ ಕುರಿತು ಮೀನುಗಾರಿಕೆ ಸಚಿವರ ಬಳಿಯೂ ಚರ್ಚೆ ಮಾಡುತ್ತೇನೆ.
 
    ಪಂಪ್ ಮಾಡಿ ನೀರು ತುಂಬಿಸಲು ಸಾಕಷ್ಟು ವಿದ್ಯುತ್ ಖರ್ಚಾಗುತ್ತಿದ್ದು, ಅದರ ವೆಚ್ಚವನ್ನು ಈ ಮೂಲಕ ಭರಿಸಲು ನಿರ್ಧರಿಸಿದ್ದೇವೆ. ಬೆಳಗಾವಿ ಭಾಗದಲ್ಲಿ ರೂ.1,200 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ. ಕಾಲುವೆಗೆ ನೀರು ಬಿಡುವಾಗ ಒಂದು ಲೆಕ್ಕ, ಆನಂತರ ಒಂದು ಲೆಕ್ಕ ಸಿಗುತ್ತಿದೆ. ಅದಕ್ಕೆ ಈ ಎಲ್ಲಾ ವಿಚಾರಗಳನ್ನು ಸೇರಿಸಿ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಒಂದಷ್ಟು ಹೊಸ ಯೋಜನೆಗಳನ್ನು ರೂಪಿಸಲು ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದರು.

 

   ಉತ್ತರ ಕರ್ನಾಟಕದಲ್ಲಿ ಹೊಸ ಯೋಜನೆಗಳ ಕುರಿತು ಚಿಂತನೆಗಳಿವೆ. ಮಲಪ್ರಭಾ ಜಲಾಶಯ ಹೊರತುಪಡಿಸಿ ಉತ್ತರ ಕರ್ನಾಟಕದ ಎಲ್ಲ ಕೆರೆಗಳು ಮತ್ತು ಜಲಾಶಯಗಳು ತುಂಬಿವೆ. ಹಳೆ ಮೈಸೂರು ಭಾಗದಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಿದರು.

    ಇದೇ ವೇಳೆ ತಮ್ಮ ಹಾಗೂ ಸಚಿವ ಸತೀಶ ಜಾರಕಿಹೊಳಿ ನಡುವಿನ ಭಿನ್ನಾಭಿಪ್ರಾಯ ಕುರಿತ ಪ್ರಶ್ನೆಗೆ ಉತ್ತರಿಸಿ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap