ಭಿನ್ನಮತದ ನಡುವೆ ಬಿಜೆಪಿ ಶಾಸಕಾಂಗ ಸಭೆ

ಬೆಳಗಾವಿ:

     ಚಳಿಗಾಲದ ಅಧಿವೇಶನದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ನಡುವೆಯೂ ಸರ್ಕಾರದವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸುವಲ್ಲಿ ಹಿನ್ನೆಡೆ ಸಾಧಿಸಿರುವ ಬಿಜೆಪಿ ಮಂಗಳವಾರ ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದರೂ, ಕೆಲವು ಶಾಸಕರು ಸಭೆಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನ ಮತ್ತೊಮ್ಮೆ ಹೊರ ಹಾಕಿದ್ದಾರೆ.

    ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‌.ಅಶೋಕ ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಇದ್ದರು. ನಿರೀಕ್ಷೆಯಂತೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಎಸ್‌.ಟಿ.ಸೋಮಶೇಖರ್ ಅವರು ಭಾಗವಹಿಸಿರಲಿಲ್ಲ.

    ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ ಅವರು, ಎಲ್ಲ ಶಾಸಕರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲಿಸಬೇಕಾಗಿದೆ ಎಂದರು.

    ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಯಾವುದೇ ಸಂದರ್ಭದಲ್ಲಿ ಕರೆದರೂ ಬರಲು ಸಿದ್ಧನಿದ್ದೇನೆ. ಬುಧವಾರ ಸಂಜೆ ಹಮ್ಮಿಕೊಂಡಿರುವ ಹೋರಾಟದಲ್ಲಿ ಎಲ್ಲ ಶಾಸಕರೂ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಯಡಿಯೂರಪ್ಪ ಮನವಿ ಮಾಡಿದರು.

    ವಿಧಾನಮಂಡಲದಲ್ಲಿ ಹೋರಾಟ ಮಾಡುವಾಗ ಹಿರಿಯ ಶಾಸಕರ ಜತೆ ಚರ್ಚಿಸಿ ಒಮ್ಮತದ ನಿರ್ಣಯ ತೆಗೆದುಕೊಂಡು ಅಖಾಡಕ್ಕಿಳಿಯಬೇಕು ಎಂದು ಅವರು ಸಲಹೆ ನೀಡಿದರು.ಬಿ.ವೈ.ವಿಜಯೇಂದ್ರ ಮಾತನಾಡಿ, ಏನೇ ಭಿನ್ನ ಅಭಿಪ್ರಾಯಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ. ಬಹಿರಂಗವಾಗಿ ಮಾತನಾಡುವುದು ಬೇಡ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲಿಸಬೇಕಾಗಿದೆ ಎಂದು ಹೇಳಿದರು.

    ವಿರೋಧಪಕ್ಷದ ನಾಯಕ ಆರ್‌.ಅಶೋಕ ಮಾತನಾಡಿ, ‘ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿರುವುದರಿಂದ ನಮಗೆ ಮತ್ತಷ್ಟು ಶಕ್ತಿ ಬಂದಿದೆ. ಕೆಲವು ಮಂತ್ರಿಗಳು ಕೊಬ್ಬಿದ್ದಾರೆ. ಅಧಿವೇಶನ ಮುಗಿದ ಬಳಿಕ ಅವರ ವಿರುದ್ಧ ಹೋರಾಟ ನಡೆಸಬೇಕಾಗಿದೆ’ ಎಂದರು. ಸಭೆಯಲ್ಲಿ ಶಾಸಕರಿಗೆ ಮಾತನಾಡಲು ಅವಕಾಶ ಇರಲಿಲ್ಲ ಎಂದು ಮೂಲಗಳು ಹೇಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap