ಬೆಂಗಳೂರು
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದ ಬಿಳಗುಲಿ ಗ್ರಾಮದಲ್ಲಿ ತಮ್ಮ ಚುನಾವಣಾ ಪ್ರಚಾರದ ವೇಳೆ ಚುನಾವಣಾ ನೀತಿಸಂಹಿತೆ ಜಾರಿಯಾದ ಬಳಿಕ, ಅಂದರೆ ಮಾರ್ಚ್ 29ರ ಸಂಜೆ 4.15ರ ಸುಮಾರಿಗೆ ಪ್ರಚಾರ ಸ್ಥಳದಲ್ಲಿದ್ದ ವಾಲಗ ಮತ್ತು ಡೋಲು ಬಾರಿಸುವವರಿಗೆ ಸುಮಾರು 1 ಸಾವಿರ ರೂಪಾಯಿ ನೀಡಿ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಬಿಜೆಪಿ ಮನವಿ ಮಾಡಿದೆ.
ಈ ಸಂಬಂಧ ಇಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಹಣ ಹಂಚಿರುವ ವಿಡಿಯೋದ ಲಿಂಕ್ ವಿವರವನ್ನು ಮನವಿಪತ್ರದಲ್ಲಿ ನೀಡಲಾಗಿದೆ. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ವಕ್ತಾರ ಡಾ. ರಾಘವೇಂದ್ರ ರಾವ್, ಕಾನೂನು ಪ್ರಕೋಷ್ಠದ ಸದಸ್ಯ ಶಿವಕುಮಾರ್ ಅವರ ನಿಯೋಗವು ಈ ದೂರುಗಳನ್ನು ಸಲ್ಲಿಸಿತು.
ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೆ ಚ್ಯುತಿ ಬರುವಂತೆ ಸಿದ್ದರಾಮಯ್ಯನವರು ಮಾತನಾಡಿದ್ದಾಗಿ ಇನ್ನೊಂದು ದೂರು ನೀಡಲಾಗಿದೆ. ?ಕಾಂಗ್ರೆಸ್ ಕಟ್ಟಿಹಾಕುವುದಕ್ಕಾಗಿಯೇ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳನ್ನು ಚುನಾವಣಾ ಆಯೋಗ ನಿಯೋಜಿಸಿದೆ? ಎಂದು ಹೇಳಿದ್ದು, ಇದು ಸಂವಿಧಾನಾತ್ಮಕ ಸಂಸ್ಥೆಯ ವಿರುದ್ಧ ಆಧಾರರಹಿತ ಆರೋಪವಾಗಿದೆ. ಇದರಿಂದ ಜನರ ಮನಸ್ಸಿನಲ್ಲಿ ಸಂಸ್ಥೆಯ ವಿರುದ್ಧ ನಕಾರಾತ್ಮಕ ಅಭಿಪ್ರಾಯ ಮೂಡಿಸುವಂತಿದೆ. ಆದ್ದರಿಂದ ಸಿದ್ದರಾಮಯ್ಯರ ವಿರುದ್ಧ ಸೂಕ್ತ ಕ್ರಮಕ್ಕೆ ಕೋರಲಾಗಿದೆ.
ಸುರ್ಜೇವಾಲಾ ವಿರುದ್ಧ ದೂರು
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬಿಜೆಪಿ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಾರೆ. ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕರ್ನಾಟಕ ಚುನಾವಣೆ ಸಂಬಂಧ ನೀಡಿದ ಹೇಳಿಕೆಯಲ್ಲಿ ?ದಿ ಬಿಜೆಪಿ 40% ಕಮಿಷನ್ ಸರ್ಕಾರ, ವಿಚ್ ಹ್ಯಾಸ್ ಬ್ರೇಜನ್ಲಿ ಲೂಟೆಡ್ ದಿ ಸ್ಟೇಟ್? ಎಂದುದಾಗಿ ಬಿಜೆಪಿ ವಿರುದ್ಧ ಆಧಾರರಹಿತ ಆರೋಪ ಮಾಡಿ ಮತದಾರರಲ್ಲಿ ತಪುö್ಪ ಮಾಹಿತಿ ನೀಡಿ, ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಸುರ್ಜೇವಾಲಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಕೋರಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ