ಹುಳಿಯಾರು:
ಮುಸ್ಲಿಮರು ಶೈಕ್ಷಣಿವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದ ಕಾರಣಕ್ಕೆ ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸಿನ ಮೇರೆಗೆ ಶೇ.4 ರಷ್ಟು ಮೀಸಲಾತಿಯನ್ನು ಸರ್ಕಾರ ನೀಡಿತ್ತು.
ಈ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಕಿತ್ತು ಕೊಂಡಿರುವುದು ಘೋರ ಅನ್ಯಾಯ ಮತ್ತು ಅಕ್ಷಮ್ಯ ಎಂದು ಜಿಲ್ಲಾ ಖಾದಿ ಬೋರ್ಡ್ನ ಮಾಜಿ ಅಧ್ಯಕ್ಷ ಹುಳಿಯಾರಿನ ಸೈಯದ್ ಜಬೀಉಲ್ಲಾ ಅವರು ಖಂಡಿಸಿದ್ದಾರೆ.
ಚಿನ್ನಪ್ಪರೆಡ್ಡಿ ಆಯೋಗದ ಮೂಲಕ ಬಂದ ಸಣ್ಣದೊಂದು ಸಾಮಾಜಿಕ ನ್ಯಾಯದ ಆಶಯಕ್ಕೆ ಬೊಮ್ಮಾಯಿ ಕೊಡಲಿ ಪೆಟ್ಟು ನೀಡಿ ಮುಸ್ಲಿಮರಿಗೆ ಅನ್ಯಾಯ ಮಾಡಿದ್ದಾರೆ ಎಂದರಲ್ಲದೆ ಯಾವ ಜಾತಿಯವರೂ ಸಹ ಮುಸ್ಲಿಂ ಮೀಸಲಾತಿ ಕಿತ್ತು ನಮಗೆ ಕೊಡಿ ಎಂದು ಕೇಳಿಲ್ಲ. ಕೇವಲ ರಾಜಕಾರಣಕ್ಕಾಗಿ ಮುಸ್ಲಿಮರ ಮೀಸಲಾತಿ ಮುನ್ನೆಲೆಗೆ ತಂದು ಮತಬ್ಯಾಂಕ್ ಸೃಷ್ಠಿಸುವ ಹುನ್ನಾರವಲ್ಲದೆ ಇದರಲ್ಲಿ ಬೇರೆನೂ ಇಲ್ಲ ಎಂದು ಹೇಳಿದ್ದಾರೆ.
ಸಂವಿಧಾನ ಬದ್ದವಾಗಿರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಸ್ಟೀಸ್ ಚಿನ್ನಪ್ಪರೆಡ್ಡಿ ಆಯೋಗ ಮುಸ್ಲಿಮರನ್ನು ಹಿಂದುಳಿದ ವರ್ಗದಲ್ಲಿ ಪರಿಗಣಿಸಿ ಮೀಸಲಾತಿ ನೀಡಿರುವಾಗ ಈ ಮೀಸಲಾತಿಗೆ ಸಾಂವಿಧಾನಿಕ ಪ್ರಾಮುಖ್ಯತೆ ಇದೆ ಎಂದಲ್ಲವೆ ಎಂದು ಪ್ರಶ್ನಿಸಿದರಲ್ಲದೆ ಸಂವಿಧಾನದ ಆಶಯಕ್ಕೆ ಮೂಲ ಹೊಡೆತ ನೀಡಲು ಹೊರಟಿರುವ ಸರ್ಕಾರ, ಮುಸ್ಲಿಂ ಸಮುದಾಯದ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಮತ್ತು ನೌಕರಿ ವಿಷಯದ ಕುರಿತು ಅನ್ಯಾಯ ಮಾಡುತ್ತಲ್ಲೆ ಬಂದಿದೆ ಎಂದು ಆರೋಪಿಸಿದರು.
ಮೋದಿಯವರು ಬಾಯಿಯಲ್ಲಿ ಮಾತ್ರ ಸಬ್ ಕ ಸಾತ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಆದರೆ ಧಾರ್ಮ ಮತ್ತು ಜಾತಿಯ ತಾರತಮ್ಯ ಮಾಡುತ್ತಾರೆ. ಅದರಲ್ಲೂ ಮುಸ್ಲಿಂ ಸಮುದಾಯ ಇವರ ಟಾರ್ಗೆಟ್ ಆಗಿದ್ದು ಹಲಾಲ್ ಕಟ್, ಹಿಜಾಬ್ ಹೀಗೆ ಒಂದಿಲ್ಲೊಂದು ವಿಷಯವನ್ನು ಮುನ್ನೆಲೆಗೆ ತಂದು ತೇಜೋವಧೆ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜಾತಿಧರ್ಮದ ತಾರತಮ್ಯ ಮಾಡದೆ ಶವಸಂಸ್ಕಾರ ಮಾಡಿದ ಮುಸ್ಲೀಂಮರಿಗೆ ಬಿಜೆಪಿ ಸರ್ಕಾರ ಕೊಡುವ ಕೊಡುಗೆ ಇದೆ ಏನು ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ