ಬೆಂಗಳೂರು:
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಿಜೆಪಿಯ ದೆಹಲಿ ತಂಡವು ಕೆಲವು ಪೈಪೋಟಿಯುತ ಕ್ಷೇತ್ರಗಳ ಮೇಲೆ ತೀವ್ರಾ ನಿಗಾ ಇಡುತ್ತಿದೆ.
ರಾಜ್ಯದಲ್ಲಿ ಬಿಜೆಪಿ 25 ಸಂಸದರು, ಒಬ್ಬರು ಸ್ವತಂತ್ರ, ಒಬ್ಬರು ಜೆಡಿಎಸ್ ಮತ್ತು ಒಬ್ಬರು ಕಾಂಗ್ರೆಸ್ ಸಂಸದರಿದ್ದಾರೆ. ಬಿಜೆಪಿ ಈ ಬಾರಿ 25 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಮೂರು ಸ್ಥಾನಗಳನ್ನು ಮೈತ್ರಿಕೂಟ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಹಾಲಿ ಸಂಸದರ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿಯನ್ನು ಬದಲಿಸಲಾಗಿದ್ದು, ಟಿಕೆಟ್ ಸಿಗದ ನಾಯಕರು ಹಾಗೂ ಅವರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಅವರಲ್ಲಿ ಕೆಲವರು ನಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿಲ್ಲ, ಹೀಗಾಗಿ ಪಕ್ಷದ ಅಭ್ಯರ್ಥಿಗಳು ಮುಜುಗರಕ್ಕೀಡಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕೆಲವು ಅತೃಪ್ತ ನಾಯಕರನ್ನು ಬಿಜೆಪಿಯ ಹಿರಿಯ ನಾಯಕರಾದ ಬಿಎಸ್ ಯಡಿಯೂರಪ್ಪ, ಪ್ರಲ್ಹಾದ್ ಜೋಶಿ ಮತ್ತು ಇತರ ನಾಯಕರು ಮನವೊಲಿಸಿದ್ದಾರೆ, ಸದ್ಯ ಅವರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಲವು ಭಿನ್ನಮತೀಯ ನಾಯಕರಿಗೆ ಎಚ್ಚರಿಕೆ ನೀಡಿದ್ದರು.ಪಕ್ಷದ ಕೆಲವು ನಾಯಕರೊಂದಿಗೆ ಅಮಿತ್ ಸಂಧಾನ ನಡೆಸಿದ್ದಾರೆ. ರಾಜ್ಯ ನಾಯಕರಿಗಿಂತ ಪ್ರತಿ ಕ್ಷೇತ್ರದಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಅಮಿತ್ ಶಾ ಅವರಿಗೆ ಹೆಚ್ಚಿನ ಮಾಹಿತಿಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ಕ್ಷೇತ್ರದಲ್ಲಿ ಕೆಲಸ ಮಾಡುವ, ಕೆಲವು ನಾಯಕರ ಪ್ರತಿ ನಡೆ ಮತ್ತು ಹೇಳಿಕೆಗಳನ್ನು ಗಮನಿಸಲು ಅಮಿತ್ ಶಾ ಅವರ ಪರವಾದ ಒಂದು ತಂಡವಿದೆ. ಈ ತಂಡ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಅವರಿಗೆ ವರದಿ ಮಾಡುತ್ತದೆ, ನಂತರ ಅವರು ದೆಹಲಿಗೆ ಮಾಹಿತಿ ರವಾನಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಮೈಸೂರು, ಚಿಕ್ಕಬಳ್ಳಾಪುರ, ಹಾಸನ, ಕೊಪ್ಪಳ, ಬೆಳಗಾವಿ, ಮಂಡ್ಯ, ಬೆಂಗಳೂರು ಉತ್ತರ ಮತ್ತು ಇತರ ಕೆಲವು ಕ್ಷೇತ್ರಗಳ ಮೇಲೆ ಕಣ್ಗಾವಲು ಇಡಲಾಗಿದೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ, ನಾವು ಗೆಲ್ಲುವ ಉತ್ತಮ ಅವಕಾಶವಿದ್ದ 20 ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ಪಕ್ಷದ ನಾಯಕರ ನಡುವಿನ ಕಿತ್ತಾಟದಿಂದಾಗಿ ನಕಾರಾತ್ಮಕ ಫಲಿತಾಂಶ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಅದು ಪುನರಾವರ್ತನೆಯಾಗದಂತೆ ದೆಹಲಿಯ ಬಿಜೆಪಿ ತಂಡವು ನಿಗಾ ಇರಿಸಿದೆ, ಏಕೆಂದರೆ ಅದು ಪಕ್ಷದ ಭವಿಷ್ಯವನ್ನು ಹಾಳುಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.
ಹಾಸನದಂತೆ ಕೆಲವೆಡೆ ಬಿಜೆಪಿ ನಾಯಕರು ಜೆಡಿಎಸ್ ಅಭ್ಯರ್ಥಿಗಳಿಗೆ ಸಹಕಾರ ನೀಡುತ್ತಿಲ್ಲ. ಇದು ಕೂಡ ದೆಹಲಿಯ ಪಕ್ಷದ ಮುಖಂಡರಿಗೆ ಸರಿ ಹೋಗಿಲ್ಲ. ಎಲ್ಲವನ್ನು ಅವರು ಗಮನಿಸುತ್ತಿದ್ದಾರೆ ಮತ್ತು ಚುನಾವಣೆಗಳು ಮುಗಿದ ನಂತರ ಅಂತಹ ನಾಯಕರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ.