ಕರ್ನಾಟಕ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟ ಬಿಜೆಪಿ ಹೈಕಾಮಂಡ್….!

ಬೆಂಗಳೂರು:

   ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳು ಬಿರುಸಿನಿಂದ ಪ್ರಚಾರ ನಡೆಸುತ್ತಿವೆ. ಆದರೆ, ರಾಜ್ಯ ಬಿಜೆಪಿಯಲ್ಲಿ ಮಾತ್ರ ಇನ್ನೂ ಬಿಕ್ಕಟ್ಟುಗಳು ಶಮನಗೊಂಡಿಲ್ಲ. ರಾಜ್ಯದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಬಂಡಾಯ ಶಮನಗೊಳಿಸುವಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ವಿಫಲವಾಗಿದ್ದು, ಹೈಕಮಾಂಡ್ ಮಧ್ಯಪ್ರವೇಶಿಸಿದರೂ ಕೂಡ ಭಿನ್ನಾಭಿಪ್ರಾಯಗಳು ದೂರಾಗಿಲ್ಲ ಎನ್ನಲಾಗಿದೆ.

   ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಪುತ್ರ ಹಾಗೂ ಹಾಲಿ ಸಂಸದ ಬಿವೈ ರಾಘವೇಂದ್ರ ಹಾಗೂ ಬಿಜೆಪಿಯ ಮಾಜಿ ಸಚಿವ ಕೆಎಸ್ ಈಶ್ವರಪ್ಪ ನಡುವೆ ಜಟಾಪಟಿ ಮುಂದುವರೆದಿದೆ. ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಈಶ್ವರಪ್ಪ ಅವರು ಪುನರುಚ್ಛರಿಸುತ್ತಲೇ ಇದ್ದಾರೆ.

   ಹಾಸನ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಿರುವುದಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಅಪ್ತ ಪ್ರೀತಂ ಅಸಮಾಧಾನ ವ್ಯಕ್ತಪಡಿಸಿದ್ದರು.

   ಈ ಹಿನ್ನೆಲೆಯಲ್ಲಿ ಹಾಸನದಲ್ಲಿನ ಬಂಡಾಯ ಶಮನಗೊಳಿಸಿಲು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಮತ್ತು ಜೆಡಿಎಸ್‌ನ ತುರ್ತು ಸಮನ್ವಯ ಸಭೆ ನಡೆಸಿದ್ದರು.

   ಸಭೆ ಬಳಿಕ ಮಾತನಾಡಿದ ಅಗರ್ವಾಲ್ ಅವರು, ಪ್ರೀತಂಗೌಡ ಅವರಿಗೆ ಮೈಸೂರು, ಚಾಮರಾನಗರ ಉಸ್ತುವಾರಿ ನೀಡಿದ್ದೇವೆ. ಹೀಗಾಗಿ ಅವರು ಹಾಸನಕ್ಕೆ ಹೋಗಲು ಸಾಧ್ಯವಾಗಿಲ್ಲ. ಅಗತ್ಯ ಬಿದ್ದರೆ ಆಯ್ದ ಸ್ಥಳಗಳಲ್ಲಿ ಪ್ರಜ್ವಲ್ ಪರ ಪ್ರಚಾರ ಮಾಡುವುದಾಗಿ ಪ್ರೀತಂ ಹೇಳಿದ್ದಾರೆಂದು ಹೇಳಿದರು.

   ಈ ನಡುವೆ ಬಿಜೆಪಿಯಲ್ಲಿನ ಬಂಡಾಯವನ್ನೇ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಳು ಮುಂದಾಗಿರುವ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಇತ್ತೀಚೆಗೆ ಹಾಸನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಜ್ವಲ್‌ಗೆ ಬೆಂಬಲ ನೀಡುವಾಗ ಎಚ್ಚರಿಕೆ ವಹಿಸುವಂತೆ ಪ್ರೀತಂ ಅವರಿಗೆ ಸಲಹೆ ನೀಡಿದ್ದಾರೆ.

    ಇನ್ನು ಹಾಸನದ ಬಳಿಕ ತುಮಕೂರಿನಲೂ ಬಂಡಾಯ ಶಮನಗೊಳಿಸಲು ಅಗರ್ವಾಲ್ ಯತ್ನಿಸಿದ್ದಾರೆ. ಮಾಜಿ ಸಚಿವ ಮತ್ತು ಯಡಿಯೂರಪ್ಪ ನಿಷ್ಠಾವಂತ ಜೆಸಿ ಮಾಧುಸ್ವಾಮಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಮಾಧುಸ್ವಾಮಿ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷವು ಎಸ್ ಸೋಮಣ್ಣ ಅವರನ್ನು ಆಯ್ಕೆ ಮಾಡಿದ್ದರಿಂದ ಅಸಮಾಧಾನಗೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಅಗರ್ವಾಲ್ ಅವರು ಮಾಧುಸ್ವಾಮಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೂಲಕ ‘ಸೋಮಣ್ಣ ನಾನು ಆಯ್ಕೆ ಮಾಡಿದ ಅಭ್ಯರ್ಥಿ’ ಎಂಬ ಸಂದೇಶವನ್ನು ರವಾನಿಸುವ ಕೆಲಸ ಮಾಡಿದರು. 

   ಬಿಜೆಪಿ ಬಂಡಾಯ ನಾಯಕ ಕೆಎಸ್ ಈಶ್ವರಪ್ಪಗೆ ಹೈಕಮಾಂಡ್‌ ಬುಲಾವ್; ನಾಳೆ ಅಮಿತ್ ಶಾ ಭೇಟಿ

ಹೈಕಮಾಂಡ್ ಸಂದೇಶದ ನಡುವೆಯೂ ಮಾಧುಸ್ವಾಮಿಯವರು ಸೋಮಣ್ಣ ಅವರನ್ನು ಭೇಟಿ ಮಾಡದೆ, ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಬರಮಾಡಿದ್ದರು. ಈ ಬೆಳವಣಿಗೆ ಹಲವರ ಹುಬ್ಬೇರುವಂತೆ ಮಾಡಿದೆ.

   ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಮಾಧುಸ್ವಾಮಿ, ನಾವು ದೀರ್ಘಕಾಲದ ಸ್ನೇಹಿತರು. ಮುದ್ದಹನುಮೇಗೌಡ ಅವರು ನನ್ನ ಬೆಂಬಲವನ್ನು ಕೋರಿದರು. ಆದರೆ ಬೇರೆ ಪಕ್ಷದಲ್ಲಿರುವ ನಾನು ಅದಕ್ಕೆ ಹೇಗೆ ಬದ್ಧನಾಗುತ್ತೇನೆ? ನನ್ನನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

   ವಾಸ್ತವವಾಗಿ ಸೋಮಣ್ಣ ತುಮಕೂರಿನಲ್ಲಿ ಸ್ಪರ್ಧಿಸದಂತೆ ಹೈಕಮಾಂಡ್ ಹೇಳಿದ್ದರೂ ಸೋಮಣ್ಣ ಅವರು ಸವಾಲಾಗಿ ತೆಗೆದುಕೊಂಡು ಸ್ಪರ್ಧೆಗಿಳಿದಿದ್ದಾರೆಂದು ತಿಳಿದುಬಂದಿದೆ.

    ಬಿಜೆಪಿಯಲ್ಲಿಯೇ ಇದ್ದ ಮುದ್ದಹನುಮೇಗೌಡ ಅವರು, ಸೋಮಣ್ಣ ಬಿಜೆಪಿ ಅಭ್ಯರ್ಥಿಯಾಗುವ ಸುಳಿವು ಸಿಕ್ಕ ಬಳಿಕ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು.

    ಇನ್ನು ಬೆಂಗಳೂರಿನ ಯಶವಂತಪುರ ಕ್ಷೇತ್ರದ ಶಾಸಕರಾದ ಎಸ್‌ಟಿ ಸೋಮಶೇಖರ್ ಮತ್ತು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿಯಲ್ಲಿರುವಂತೆ ಮನವೊಲಿಸುವಲ್ಲಿ ಯಡಿಯೂರಪ್ಪ ಅವರು ವಿಫಲವಾಗಿದ್ದು, ಇದೀಗ ಈ ಇಬ್ಬರೂ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಎಂಎಲ್ಸಿ ತೇಜಸ್ವಿನಿ ಗೌಡ ಕೂಡ ಕಾಂಗ್ರೆಸ್ ಸೇರಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap