ಕಲಬುರಗಿ:
ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ಪ್ರಯೋಜನವಿಲ್ಲ ಎಂದಿರುವ ಸಂಸದ ತೇಜಸ್ವಿ ಸೂರ್ಯನನ್ನು ಅಮವಾಸ್ಯೆ ಸೂರ್ಯ ಎನ್ನದೇ ಬೇರೆ ಏನು ಹೇಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ತೇಜಸ್ವಿ ಸೂರ್ಯ ಅವರು ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ನಷ್ಟಆಗುತ್ತದೆ ಎಂಬ ಹೇಳಿಕೆ ನೀಡಿದ್ದು, ಈ ಮಾತನ್ನು ಪಕ್ಷದ ಯಾವ ಮುಖಂಡರೂ ಖಂಡಿಸಿಲ್ಲ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೋರೇಟ್ ವಲಯದ 14 ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಿದೆ. ಆದರೆ, ರೈತರ ಸಾಲ ಮನ್ನಾ ಮಾಡಲು ಬಿಜೆಪಿಯವರಿಗೆ ಆಗುತ್ತಿಲ್ಲ. ಓರ್ವ ಸಂಸದನಾಗಿ ಇಂತಹ ಹೇಳಿಕೆ ನೀಡುತ್ತಾನೆ ಎಂದರೆ ಇದು ಬಿಜೆಪಿಯ ಆಂತರಿಕ ಚಿಂತನೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಂಡವಾಳಶಾಹಿಗಳು, ಉದ್ಯಮಿಗಳ 14 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದಾರೆ. ಇದರಿಂದ ದೇಶಕ್ಕೆ ಲಾಭವಾಗಿದೆಯಾ? ಒಂದು ರಾಷ್ಟ್ರೀಯ ಪಕ್ಷದ ಯುವಮೋರ್ಚ ಅಧ್ಯಕ್ಷರಾಗಿ ಇಂಥಾ ಮಾತು ಹೇಳುತ್ತಾರೆ ಎಂದರೆ ಅವರನ್ನು ಅಮವಾಸ್ಯೆ ಸೂರ್ಯ ಎನ್ನದೆ ಬೇರೆ ಏನು ಹೇಳಬೇಕು ಎಂದಿದ್ದಾರೆ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೊದಿ ಸರ್ಕಾರವು ಕಳೆದ ಚುನಾವಣೆ ಸಮಯದಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಈಗ ರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ರೈತರ ಸಾಲವನ್ನು ಮನ್ನಾ ಮಾಡಿ ಎಂದರೆ ಇದರಿಂದ ಆರ್ಥಿಕತೆಗೆ ಮಾರಕವಾಗುತ್ತದೆ ಎಂದು ಹೇಳಿ ಕೈಗಾರಿಕೋದ್ಯಮಿಗಳು ಹಾಗೂ ಕಾಪೋರೇಟ್ ಕಂಪನಿಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿ ನಮ್ಮ ಸರ್ಕಾರ ಕಾಪೊರ್‍ರೇಟ್ ಪರ ಎಂದು ಸಾಬೀತುಪಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.