ಬಿಜೆಪಿ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದೆ : ರಾಹುಲ್‌ ಗಾಂಧಿ

ತುಮಕೂರು

     ಭಾರತೀಯ ಜನತಾ ಪಾರ್ಟಿಯವರಿಗೆ 40 ಎನ್ನುವ ನಂಬರ್ ಮೇಲೆ ಬಹಳ ಪ್ರೀತಿ. ಹಾಗಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 40 ಸೀಟುಗಳನ್ನು ಮಾತ್ರ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಕರೆ ನೀಡಿದರು.

    ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು 150 ಸ್ಥಾನಗಳ ಗೆಲ್ಲಿಸುವ ಮೂಲಕ ಅಧಿಕಾರಕ್ಕೆ ತರಬೇಕು ಎಂದು ಅವರು ಮನವಿ ಮಾಡಿದರು.

    ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಏರ್ಪಡಿಸಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿ ಕಾಮಗಾರಿ, ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮೀಷನ್ ಪಡೆದಿರುವ ಬಿಜೆಪಿಯನ್ನು ಈ ಬಾರಿಯ ಚುನಾವಣೆಯಲ್ಲಿ ಕೇವಲ 40 ಸೀಟುಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 150 ಸ್ಥಾನ ನೀಡಿದರೆ ಬಿಜೆಪಿಯವರು ನಮ್ಮ ಶಾಸಕರನ್ನು ಕದಿಯಲು ಆಗುವುದಿಲ್ಲ. ಆದ್ದರಿಂದ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.

     ಬಿಜೆಪಿ ಕಾಂಗ್ರೆಸ್ ಶಾಸಕರಿಗೆ ಹಣ ಕೊಟ್ಟು ಖರೀದಿ ಮಾಡಿ ಸರ್ಕಾರವನ್ನು ರಚನೆ ಮಾಡಿದೆ. ಕಳೆದ 3 ವರ್ಷಗಳಿಂದ ಬಿಜೆಪಿ ಕರ್ನಾಟಕದಲ್ಲಿ ಕೇವಲ ಭ್ರಷ್ಟಾಚಾರಕ್ಕೆ ಮಾತ್ರ ಹೆಸರಾಗಿದೆ. ಈ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದು ಕರ್ನಾಟಕದ ಜನ ಕರೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ವಿವಿಧ ಯೋಜನೆಗಳ ಮೂಲಕ ಜನರಿಗೆ ಹಣ ಒದಗಿಸುವುದು ಹಾಗೂ ಆರೋಗ್ಯ, ರಸ್ತೆ ನಿರ್ಮಾಣಕ್ಕೆ ಹಣ ಒದಗಿಸುವುದು ಸರ್ಕಾರದ ಕೆಲಸವಾಗಿರುತ್ತದೆ. ಆದರೆ ಬಿಜೆಪಿ ಸರ್ಕಾರ ಈ ಕೆಲಸಗಳಿಗೆ ಹಣವನ್ನು ಒದಗಿಸುವ ಬದಲು ರೈತರು, ಜನಸಾಮಾನ್ಯರು, ಬಡವರ ಜೇಬಿನಿಂದ ಹಣವನ್ನು ಕಿತ್ತುಕೊಂಡಿದೆ ಎಂದು ಹರಿಹಾಯ್ದರು.

     ಕರ್ನಾಟಕದ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮೀಷನನ್ನು ಬಿಜೆಪಿ ಸರ್ಕಾರ ದೋಚಿದೆ. ಈ ವಿಚಾರ ಪ್ರಧಾನ ಮಂತ್ರಿಯವರಿಗೆ ಗೊತ್ತಿಲ್ಲ ಎಂದೇನಿಲ್ಲ. ಕರ್ನಾಟಕದ ಗುತ್ತಿಗೆದಾರರ ಸಂಘದವರು ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಕೇಳುತ್ತಿದೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಮಠಾಧೀಶರೊಬ್ಬರು ಸಹ ನನ್ನ ಹತ್ತಿರವೂ 30 ಪರ್ಸೆಂಟ್ ಕಮೀಷನನ್ನು ಈ ಸರ್ಕಾರ ಪಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು ದೂರಿದರು.

    ಪೊಲೀಸರ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ, ಇಂಜಿನಿಯರ್ ನೇಮಕಾತಿ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ನೇಮಕಾತಿಯಲ್ಲೂ ಈ ಬಿಜೆಪಿ ಸರ್ಕಾರ ಅಕ್ರಮ ನಡೆಸಿದೆ ಎಂದು ಅವರು ಆರೋಪಿಸಿದರು.
ಕರ್ನಾಟಕದಲ್ಲಿ ಎರಡೂವರೆ ಸಾವಿರ ಕೋಟಿ ಕೊಟ್ಟು ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದಾರೆ. ಈ ವಿಚಾರದ ಕರ್ನಾಟಕದಲ್ಲಿ ಇರುವಂತಹ ಪ್ರತಿ ಮನೆಗೂ ಗೊತ್ತಿದೆ ಅಂದ ಮೇಲೆ ದೇಶದ ಪ್ರಧಾನಿಗೂ ಇದು ಗೊತ್ತಿರಲೇಬೇಕು. ಇಷ್ಟೆಲ್ಲಾ ಅನ್ಯಾಯವಾಗುತ್ತಿರುವುದು ಗೊತ್ತಿದ್ದರೂ ಸಹ ಇದನ್ನು ತಡೆಯಲು ಏನು ಪ್ರಯತ್ನ ಮಾಡಿದ್ದೀರಾ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ರಾಹುಲ್‌ಗಾಂಧಿ ಪ್ರಶ್ನಿಸಿದರು.

    ನೀವು ಕರ್ನಾಟಕದ ಜನರನ್ನು ಮತ ಕೇಳುವುದಕ್ಕಿಂತ ಮುನ್ನ ಭ್ರಷ್ಟಾಚಾರವನ್ನು ನಿಲ್ಲಿಸಲು ಏನು ಕ್ರಮ ಕೈಗೊಂಡಿದ್ದೀರಾ ಎಂಬುದರ ಬಗ್ಗೆ ಮೊದಲು ಜನರಿಗೆ ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.ವಿಧಾನಸಭಾ ಚುನಾವಣೆ ಯಾವೊಬ್ಬ ವ್ಯಕ್ತಿಗೋಸ್ಕರ, ಪ್ರಧಾನ ಮಂತ್ರಿಗೋಸ್ಕರ ನಡೆಯುತ್ತಿರುವ ಚುನಾವಣೆಯಲ್ಲ ಎಂಬುದನ್ನು ಪ್ರಧಾನಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಇದು ಕರ್ನಾಟಕದ ಯುವಕರು, ತಾಯಂದರಿಗೋಸ್ಕರ ನಡೆಯುತ್ತಿರುವ ಚುನಾವಣೆಯಾಗಿದೆ ಎಂದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್, ಮಯೂರ ಜೈಕುಮಾರ್, ಅಭ್ಯರ್ಥಿ ಬೆಮೆಲ್ ಕಾಂತರಾಜು, ಶಶಿಹುಲಿಕುಂಟೆ, ರಾಯಸಂದ್ರ ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap