4ವರ್ಷದಿಂದ ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ಲೂಟಿ ಹೊಡೆಯುತ್ತಿದೆ : ಸಿದ್ದರಾಮಯ್ಯ

ಬೆಂಗಳೂರು

      ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವ ಕೆಲಸ ಮಾಡುವುದಿಲ್ಲ ಎಂಬುದು ಬಿಜೆಪಿಯವರಿಗೆ ಅರಿವಾಗಿದ್ದು, ಹಾಗಾಗಿ ಹಣದ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಬಿಜೆಪಿ ನಾಯಕರ ಬಳಿ ಟನ್ ಗಟ್ಟಲೆ ಲೂಟಿ ಮಾಡಿರುವ ಹಣ ಇದ್ದು, 4 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನೇ ಮಾಡದೆ ಬರೀ ಲೂಟಿ ಹೊಡೆದಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

    ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರದ ಭ್ರಷ್ಟಾಚಾರಕ್ಕೆ ದಾಖಲೆ ಕೇಳುತ್ತಿದ್ದವರಿಗೆ ಮಾಡಾಳ್ ವಿರೂಪಾಕ್ಷಪ್ಪ ಮಗ ಲಂಚದ ಹಣ ಸಮೇತ ಸಿಕ್ಕಿಬಿದ್ದಿರುವುದೇ ಸಾಕ್ಷಿ. ಒಬ್ಬ ಶಾಸಕನ ಮಗನ ಮನೆಯಲ್ಲಿ 8 ಕೋಟಿ ಭ್ರಷ್ಟ ಹಣ ಸಿಕ್ಕಿದೆ ಎಂದರೆ ಇನ್ನು ಇಡೀ ಸರ್ಕಾರ ಎಷ್ಟು ಲೂಟಿ ಮಾಡಿರಬಹುದು.

    ಈ ಪ್ರಕರಣದಿಂದ ರಾಜ್ಯದಲ್ಲಿ 40% ಕಮಿಷನ್ ನಡೆಯುತ್ತಿದೆ ಎಂಬುದು ಸಾಬೀತಾಗಿದೆ. ನಿಮ್ಮದು 40% ಕಮಿಷನ್ ಸರ್ಕಾರ ಎಂದು ಹೇಳಲು ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು. ನಿಮಗೇನಾದರೂ ನೈತಿಕತೆ ಇದ್ದರೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದರು.

    ಸರ್ಕಾರ ವಿರೂಪಾಕ್ಷಪ್ಪ ಅವರ ರಕ್ಷಣೆ ಮಾಡುತ್ತಿದೆ. ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದೇನೆ. ರಾಜೀನಾಮೆ ಕೊಡಲು ಬಂದ ದಿನವೇ ಅವರ ಬಂಧನ ಆಗಬೇಕಿತ್ತು. ಈಗಲೂ ಅವರು ಬೆಂಗಳೂರಿನಲ್ಲಿದ್ದುಕೊಂಡೇ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಇಂಥಾ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಲೇಬೇಕು. ಇಂದು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಎಲ್ಲಾ ನಾಯಕರು ಅತ್ಯಂತ ಒಳ್ಳೆಯ ಕೆಲಸ ಮಾಡಿದ್ದಾರೆ. ಮುಖ್ಯವಾಗಿ ದಲಿತರು ಬಿಜೆಪಿಯ ಕಡೆಗೆ ಮುಖವನ್ನೇ ಹಾಕಬಾರದು. ಅವರು ಮನುವಾದಿಗಳು, ಬಿಜೆಪಿ ಎಂದಿಗೂ ದಲಿತರ ಹಿತದ ಬಗ್ಗೆ ಯೋಚನೆ ಮಾಡಿದ ಪಕ್ಷವಲ್ಲ ಎಂದರು.

     ಕಾಂಗ್ರೆಸ್ ಪಕ್ಷ ದೇಶದ ಎಲ್ಲಾ ಧರ್ಮಗಳನ್ನು, ಜಾತಿಯ ಜನರನ್ನು ಸಮಾನವಾಗಿ ಕಾಣುವ ಪಕ್ಷ. ಬಾಬಾ ಸಾಹೇಬರು ನೀಡಿರುವ ಸಂವಿಧಾನದವನ್ನು ಗೌರವಿಸಿ, ಅಧಿಕಾರ ಸಿಕ್ಕಾಗ ಅದರ ಧ್ಯೇಯೋದ್ದೇಶಗಳನ್ನು ಈಡೇರಿಸುವ ಕೆಲಸ ಮಾಡಿಕೊಂಡು ಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ಗೆ ನಮ್ಮ ಸಂವಿಧಾನದ ಬಗ್ಗೆ ಗೌರವ ಇಲ್ಲ. ಗೋಲ್ವಾಲ್ಕರ್, ಸಾವರ್ಕರ್ ಅವರ ಭಾಷಣಗಳು ಮತ್ತು ಬರಹಗಳನ್ನು ನೋಡಿದರೆ ಅವರಿಗೆ ಸಂವಿಧಾನದ ಬಗ್ಗೆ ಯಾವ ಗೌರವವೂ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬಿಜೆಪಿ ಶ್ರೀಮಂತ ಜನರ ಪಕ್ಷ, ಅವರು ತಳ ಸಮುದಾಯದ ಜನರ ಬಗ್ಗೆಯಾಗಲೀ, ನಾಡಿನ ಅಭಿವೃದ್ಧಿ ಬಗ್ಗೆಯಾಗಲೀ ಚಿಂತನೆ ಮಾಡುವುದಿಲ್ಲ ಎಂದರು.

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಫರ್ಮಾನು ಹೊರಡಿಸಿದ್ದಾರೆ. ಎರಡು ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವದ ವಿಚಾರಗಳನ್ನು ಇಟ್ಟುಕೊಂಡು ಭಾವನಾತ್ಮಕವಾಗಿ ಮತ ಪಡೆದಿದ್ದಾರೆ. ಬಿಜೆಪಿಯವರು ಚುನಾವಣೆಗೆ ಮೊದಲು ನಾವು ಅಧಿಕಾರಕ್ಕೆ ಬಂದ ಕೂಡಲೇ ಎಸಿಬಿ ರದ್ದು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು, ಆದರೆ ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದರೂ ಎಸಿಬಿಯನ್ನು ರದ್ದು ಮಾಡಿರಲಿಲ್ಲ.

    ಯಾಕೆಂದರೆ ಇವರಿಗೂ ಎಸಿಬಿ ಬೇಕಾಗಿತ್ತು. ಬಿಜೆಪಿ ಅಧಿಕಾರದಲ್ಲಿರುವ ಅನೇಕ ರಾಜ್ಯಗಳಲ್ಲಿ ಎಸಿಬಿ ಮತ್ತು ಲೋಕಾಯುಕ್ತ ಎರಡೂ ಇವೆ. ಉತ್ತರ ಪ್ರದೇಶ, ಗೋವಾ, ಗುಜರಾತ್, ಮಧ್ಯಪ್ರದೇಶ ಇಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಎಸಿಬಿ ಮತ್ತು ಲೋಕಾಯುಕ್ತ ಹೀಗೆ ಎರಡೂ ತನಿಖಾ ಸಂಸ್ಥೆಗಳಿವೆ, ಅಲ್ಲಿ ಯಾಕೆ ರದ್ದು ಮಾಡಿಲ್ಲ? ಇವರ ಉದ್ದೇಶ ಎಸಿಬಿ ರದ್ದು ಮಾಡಿರುವುದಾಗಿರಲಿಲ್ಲ ಎಂದು ಹೇಳಿದರು.

    ಎಸಿಬಿ ರದ್ದು ಮಾಡಿ ಎಂದು ಸಲ್ಲಿಸಿದ್ದ ಮನವಿ ಬಗ್ಗೆ ರಾಜ್ಯದ ಅಡ್ವೋಕೇಟ್ ಜನರಲ್ ಅವರು ಕೋರ್ಟ್ ನಲ್ಲಿ ಹಿಂದಿನ ಸರ್ಕಾರ ಎಸಿಬಿ ರಚನೆ ಮಾಡಿರುವುದು ಸರಿ ಎಂದು ನಮ್ಮ ಸರ್ಕಾರದ ಎಸಿಬಿ ರಚನೆಯ ಸಮರ್ಥನೆ ಮಾಡಿಕೊಂಡಿದ್ದರು. ಕೋರ್ಟ್ ನಲ್ಲಿ ಎಸಿಬಿಯನ್ನು ಸಮರ್ಥಿಸಿಕೊಂಡು, ಹೊರಗೆ ನಾವು ಎಸಿಬಿ ರದ್ದು ಮಾಡಿದ್ದೇವೆ ಎಂದು ಸುಳ್ಳು ಹೇಳುವುದು ಆತ್ಮವಂಚನೆಯಾಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ವಿಶ್ವನಾಥ್ ಶೆಟ್ಟಿ ಅವರು ಲೋಕಾಯುಕ್ತರಾಗಿದ್ದರು. ಲೋಕಾಯುಕ್ತ ಎಲ್ಲಿ ರದ್ದಾಗಿತ್ತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ