ಅನ್ನಭಾಗ್ಯ ಅಕ್ಕಿ : ಬಿಜೆಪಿಯವರಿಂದ ಅಪಪ್ರಚಾರ : ಸಿದ್ದರಾಮಯ್ಯ

ಬೆಂಗಳೂರು

     ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ನೀಡುವ ಕಾರ್ಯಕ್ರಮ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಅಲ್ಲ ಮೋದಿ ಕಾರ್ಯಕ್ರಮ ಎನ್ನುತ್ತಿದ್ದಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಮೋದಿ ಅವರ ಕಾರ್ಯಕ್ರಮವಾದರೆ ಗುಜರಾತ್, ಉತ್ತರ ಪ್ರದೇಶ ದಲ್ಲಿ ಯಾಕೆ ಉಚಿತ ಅಕ್ಕಿ ನೀಡುತ್ತಿಲ್ಲ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

     ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಹತ್ತು ಕೆ.ಜಿ. ಅಕ್ಕಿ ಪೂರೈಸುವುದಾಗಿ ಘೋಷಣೆ ಮಾಡಿ ಮಾತನಾಡಿದ ಅವರು, ಬಿಜೆಪಿಯವರು ದೇಶದಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ. ಇದು ಯುಪಿಎ ಸರ್ಕಾರದ ಕಾರ್ಯಕ್ರಮ. ಮೋದಿ ಕಾರ್ಯಕ್ರಮವಲ್ಲ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಇವರಿಗೆ ಆರ್.ಎಸ್.ಎಸ್. ತರಬೇತಿ ನೀಡುತ್ತದೆ ಎಂದರು.

     ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ದೇಶದ ಬಡವರಿಗೆ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು 3 ರೂ. ಬೆಲೆಯಲ್ಲಿ ಅಕ್ಕಿ ನೀಡಲು ನಿರ್ಧರಿಸಿತು. ನಂತರ 2013ರ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿದ್ದೇವು. ಅಧಿಕಾರಕ್ಕೆ ಬಂದ 24 ಗಂಟೆ ಒಳಗಾಗಿ ಈ ಯೋಜನೆ ಜಾರಿ ಮಾಡಿದೆವು. ಆರಂಭದಲ್ಲಿ ಪ್ರತಿ ಕೆ.ಜಿಗೆ 1 ರೂ. ನಂತೆ 5 ಕೆ.ಜಿ ಅಕ್ಕಿಯಂತೆ ಒಟ್ಟು 30 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ನಂತರ ಪ್ರತಿ ಕುಟುಂಬದ ಪ್ರತಿ ಸದಸ್ಯರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆವು ಎಂದರು.

   ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದನ್ನು ಮತ್ತೆ 5 ಕೆ.ಜಿಗೆ ಇಳಿಸಿದೆ. ನಾನು ಈ ತೀರ್ಮಾನ ಬೇಡ, ಎಂದು ಸದನದ ಒಳಗೆ ಹಾಗೂ ಹೊರಗೆ ಸರ್ಕಾರಕ್ಕೆ ಆಗ್ರಹ ಮಾಡಿದ್ದೆವು. ಕೋವಿಡ್ ಕಾಲದಲ್ಲಿ ನಮ್ಮ ಉಚಿತ ಅಕ್ಕಿ ಹಾಗೂ ನರೇಗಾ ಕಾರ್ಯಕ್ರಮಗಳು ಜನರ ಬದುಕಿಗೆ ಆಸರೆಯಾಗಿತ್ತು. ಆದರೆ ಈ ಸರ್ಕಾರದ ತೀರ್ಮಾನ ಜನರಿಗೆ ನೋವು ತಂದಿದೆ. ನಾವು ಪ್ರಜಾಧ್ವನಿಯಾತ್ರೆ ಸಂದರ್ಭದಲ್ಲಿ ಜನರು ನೀವು ಅಧಿಕಾರಕ್ಕೆ ಬಂದರೆ ಅಕ್ಕಿ ಪ್ರಮಾಣ ಹೆಚ್ಚಿಸಿ ಎಂದು ಕೇಳಿದರು. ನಂತರ ಪಕ್ಷದ ಎಲ್ಲ ನಾಯಕರು ಚರ್ಚೆ ಮಾಡಿ ತಲಾ 10 ಕೆ.ಜಿಯಂತೆ ಬಿಪಿಎಲ್ ಕಾರ್ಡುದಾರರಿಗೆ ನೀಡಲು ಪಕ್ಷ ತೀರ್ಮಾನಿಸಿದೆ. ಈ ಯೋಜನೆಯನ್ನು ಪಕ್ಷದ ಮೂರನೇ ಗ್ಯಾರಂಟಿ ಯೋಜನೆಯಾಗಿ ಘೋಷಿಸುತ್ತಿದ್ದೇವೆ ಎಂದರು.

    ಕೆಪಿಸಿಸಿ ಅಧ?ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕುಟುಂಬ ಸದಸ್ಯನಿಗೆ 10.ಕೆ.ಜಿ ಅಕ್ಕಿ ನೀಡಲು ತೀರ್ಮಾನಿಸಿದ್ದೇವೆ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ನೆರವು ನೀಡುವ ಉದ್ದೇಶದಿಂದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ ಯೋಜನೆ ಮೊದಲ ಗ್ಯಾರಂಟಿಯಾಗಿ ಘೋಷಣೆ ಮಾಡಿದ್ದೇವೆ. ಆ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 1500 ರೂ ಉಳಿತಾಯ ಮಾಡಲು ಸಹಕಾರಿಯಾಗುತ್ತಿದ್ದೇವೆ. ಇನ್ನು ಪ್ರತಿ ಮನೆಯ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನವನ್ನು ನೀಡಲು ಗೃಹಲಕ್ಷ್ಮಿ  ಎಂಬ ಎರಡನೇ ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ ಎಂದರು.

    ಕೇಂದ್ರ ಸರ್ಕಾರ ಎನ್‌ಇಪಿಯಲ್ಲಿ 1 ನೇ ತರಗತಿ ಸೇರಲು ಮಕ್ಕಳಿಗೆ 6 ವರ್ಷ ವಯೋಮಿತಿ ನಿಗದಿ ಮಾಡಿರುವುದರಿಂದ ಅನೇಕ ಮಕ್ಕಳಿಗೆ ತೊಂದರೆಯಾಗಿದೆ. ನಾವು ಕೂಡ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಈಗಿರುವ ಪದ್ಧತಿಯಲ್ಲಿ ಯಾವ ಲೋಪವಿದೆ? ಶಿಕ್ಷಣ ಎಂಬುದು ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಕೇಂದ್ರ ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ನಾವು ಅಧಿಕಾರಕ್ಕೆ ಬಂದರೆ ಎನ್‌ಇಪಿ ಜಾರಿಗೆ ಅವಕಾಶ ನೀಡವುದಿಲ್ಲ. ನಮ್ಮ ರಾಜ್ಯ ಜ್ಞಾನದ ರಾಜಧಾನಿಯಾಗಿದ್ದು, ದೇಶದಲ್ಲಿ ಇಂಜಿನಿಯರ್, ಡಾಕ್ಟರ್ ಹಾಗೂ ನರ್ಸ್ ಗಳು ರಾಜ್ಯದಿಂದಲೇ ಹೆಚ್ಚು ತಯಾರಾಗಿದ್ದಾರೆ. ಹೀಗೆ ನಮ್ಮ ರಾಜ್ಯ ಶಿಕ್ಷಣದ ಎಲ್ಲ ಹಂತದಲ್ಲೂ ದೇಶಕ್ಕೆ ಮಾದರಿಯಾಗಿದೆ.

      ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನಡುವೆ ಜಗಳವಾಗುತ್ತಿದೆ, ಕಾಂಗ್ರೆಸ್ ಗೆ ಮತ ಹಾಕಿದರೆ ಹೈಕಮಾಂಡ್ ಗೆ ಎಟಿಎಂ ಕೊಟ್ಟಂತೆ ಎಂಬ ಅಮಿತ್ ಶಾ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, ?ನಾನು ಸಿದ್ದರಾಮಯ್ಯ ಕೈಕೈ ಮಿಲಾಯಿಸಿ ಜಗಳವಾಡಲು ಕುಸ್ತಿ ಅಖಾಡದಲ್ಲಿ ಇದ್ದೇವಾ? ಜಗಳ, ಕುಸ್ತಿಗಳು ಏನಿದ್ದರೂ ಬಿಜೆಪಿಯಲ್ಲಿದೆ. ಯುದ್ಧ, ಹೇಳಿಕೆ ಸಮರ ನಡೆಯುತ್ತಿರುವುದು ಬಿಜೆಪಿ ಪಕ್ಷದಲ್ಲಿ.

     ಅವರು ಯಡಿಯೂರಪ್ಪನವರ ಕಣ್ಣಲ್ಲಿ ನೀರು ಹಾಕಿಸಿದ್ದು ಯಾಕೆ? ನಿರಾಣಿ ವಿಚಾರವಾಗಿ ಯತ್ನಾಳ್ ಏನು ಹೇಳಿದರು? ಸರ್ಕಾರದ ಬಗ್ಗೆ ವಿಶ್ವನಾಥ್, ಗೂಳಿಹಟ್ಟಿ ಶೇಖರ್ ಏನು ಹೇಳಿದ್ದಾರೆ? ವಿಧಾನಸೌಧ ಕಾರಿಡಾರ್ ನಲ್ಲಿ ಬಿಜೆಪಿ ಶಾಸಕರು ಏನು ಮಾತನಾಡುತ್ತಿದ್ದಾರೆ? ಯೋಗೇಶ್ವರ್ ಏನು ಹೇಳಿದ್ದಾರೆ? ಮಂಚದ ಮೇಲಿದ್ದ ಮಂತ್ರಿ ಯಾರು ಭ್ರಷ್ಟ ಎಂದು ಹೇಳಿದ? ಎಂಟಿಬಿ ನಾಗರಾಜ್ ಅವರು ಏನು ಹೇಳಿದರು? ಮಾಧ್ಯಮಗಳಲ್ಲಿ ಯಾರ ಸರ್ಕಾರದ ರೇಟ್ ಕಾರ್ಡ್ ಪ್ರಕಟವಾಯಿತು? ಇದು ಸುಳ್ಳಾಗಿದ್ದರೆ ಅದನ್ನು ಸಾಬೀತು ಮಾಡಿ ಅವರ ವಿರುದ್ಧ ಕೇಸ್ ಯಾಕೆ ಹಾಕಿಲ್ಲ? ಇವರಿಗೆ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವ ಆಸಕ್ತಿ ಇದ್ದರೆ ಅಧಿವೇಶನ ವಿಸ್ತರಣೆ ಮಾಡಿ, ಚರ್ಚೆಗೆ ಅವಕಾಶ ನೀಡಲಿ? ಎಂದು ತಿರುಗೇಟು ನೀಡಿದರು.

     ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮಾತನಾಡಿ, ಯುಪಿಎ ಸರ್ಕಾರ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದೆ. ನಮ್ಮ ಸರ್ಕಾರ ಕುಟುಂಬ ಸದಸ್ಯರಿಗೆ ತಲಾ 7 ಕೆ.ಜಿ ಅಕ್ಕಿ ನೀಡಲಾಗಿತ್ತು. ಕೋವಿಡ್ ನಂತಹ ಕಷ್ಟದ ಸಮಯದಲ್ಲಿ ನಮ್ಮ ಯೋಜನೆ ಜನರಿಗೆ ನೆರವಾಗಿತ್ತು. ಅವರ ಬದುಕಿಗೆ ದಾರಿ ಮಾಡಿಕೊಟ್ಟಿತ್ತು. ಇಲ್ಲದಿದ್ದರೆ ರಾಜ್ಯದಲ್ಲಿ ದೊಡ್ಡ ಕೋಲಾಹಲವೇ ಸೃಷ್ಟಿಯಾಗುತ್ತಿತ್ತು ಎಂದರು.

      ಇನ್ನು ಅಮಿತ್ ಶಾ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ಹೈಕಮಾಂಡ್ ಗೆ ಎಟಿಎಂ ಸಿಕ್ಕಂತಾಗುತ್ತದೆ ಎಂಬ ಬಗ್ಗೆ ಕೇಳಿದ್ದಾರೆ. ರಾಜ್ಯ ಸರ್ಕಾರದ 40% ಕಮಿಷನ್ ಲಂಚ ಯಾರಿಗೆ ಹೋಗುತ್ತದೆ ಎಂಬುದರ ಬಗ್ಗೆ ಅವರು ಉತ್ತರ ನೀಡಲಿ. ಇನ್ನು ನಮ್ಮ ಗ್ಯಾರಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ಬರುತ್ತದೆ ಎಂದು ಕೇಳುತ್ತಿದ್ದಾರೆ. ಇವರು ಹೊಡೆಯುತ್ತಿರುವ 40% ಕಮಿಷನ್ ಲೂಟಿ ನಿಲ್ಲಿಸಿದರೆ ಈ ನಮ್ಮ ಯೋಜನೆಗಳಿಗೆ ಹಣ ಸಿಗುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap