ಬೆಳಗಾವಿ:
ಮೈಸೂರು ಹುಲಿ ಎಂದೇ ಕರೆಸಿಕೊಳ್ಳುವ ಟಿಪ್ಪು ಸುಲ್ತಾನ್ ಅವರ ಬಗ್ಗೆ ದಿನಕ್ಕೊಂದು ಕತೆ ಸೃಷ್ಠಿಸುತ್ತಾ ಬಿಜೆಪಿ ತನ್ನ ಅಧಿಕಾರ ಬಳಸಿ ಜನರನ್ನು ಮೊಸ ಮಾಡುತ್ತಿದೆ ಎಂದು ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಊರಿಗೌಡ ಮತ್ತು ನಂಜೇಗೌಡ ಎಂಬ ಐತಿಹಾಸಿಕ ಪಾತ್ರಗಳನ್ನು ಹೊಸದಾಗಿ ಸೃಷ್ಟಿಸಿ, ಅವರು ಮೈಸೂರು ದೊರೆ ಟಿಪ್ಪು ಸುಲ್ತಾನ್ ಅವರನ್ನು ಕೊಂದಿದ್ದಾರೆ ಎಂದು ಪ್ರಚಾರ ಮಾಡುತ್ತಿರುವ ಆಡಳಿತಾರೂಢ ಬಿಜೆಪಿ ನಾಯಕರ ವಿರುದ್ಧ ರಾಜ್ಯ ಕಾಂಗ್ರೆಸ್ ಸೋಮವಾರ ತೀವ್ರ ವಾಗ್ದಾಳಿ ನಡೆಸಿದೆ. ಇದು ಚುನಾವಣೆಗಾಗಿ ಇತಿಹಾಸ ತಿರುಚಿದ್ದು, ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಈ ಹೊಸ ಪಾತ್ರದಾರಿಗಳನ್ನು ಸೃಷ್ಟಿಸಿದ್ದಾರೆ ಎಂದರು.
ಊರಿಗೌಡ ಮತ್ತು ನಂಜೇಗೌಡರ ಪಾತ್ರಗಳನ್ನು ಹೊಸದಾಗಿ ಸೃಷ್ಟಿಸಿ ಜಾತಿ ಬಣ್ಣ ಹಚ್ಚಿ, ಇತಿಹಾಸ ತಿರುಚುತ್ತಿರುವುದು ಸರಿಯಲ್ಲ. ಇದನ್ನು ಖಂಡಿಸುತ್ತೇನೆ. ಈ ಸಂಬಂಧ ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಭಟನೆ ನೇತೃತ್ವ ವಹಿಸಬೇಕು ಮತ್ತು ಸಭೆ ಕರೆಯುವಂತೆ ಒತ್ತಾಯಿಸುತ್ತೇನೆ. ಸಮಾಜದಲ್ಲಿ ವಿಷಬೀಜ ಬಿತ್ತಲು ಬಿಡಲ್ಲ ಎಂದು ಕಿಡಿಕಾರಿದರು.