ಬೆಂಗಳೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ- ಮುಡಾ ಹಗರಣ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶೋಕಾಸ್ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತವಾಗಿದ್ದು, ಬಿಜೆಪಿ ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಗುರುವಾರ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಶೋಕಾಸ್ ನೋಟಿಸ್ ಬಗ್ಗೆ ಚರ್ಚಿಸಿದ್ದು, ಅದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಶೋಕಾಸ್ ನೋಟಿಸ್ ನ ಕಾನೂನು ಸ್ಥಿತಿ ಕುರಿತು ಬಹಿರಂಗಪಡಿಸುವುದಿಲ್ಲ. ಇದು ರಾಜಕೀಯ ಪ್ರೇರಿತವಾಗಿದೆ. ಮೊದಲಿಗೆ ಇಡಿ, ಸಿಬಿಐ ಮೂಲಕ ಪ್ರಯತ್ನಿಸಿದರು. ಇದೀಗ ಬಿಜೆಪಿಯವರು ರಾಜ್ಯಪಾಲರ ಕಚೇರಿನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಾ ಬಿಜೆಪಿ ರಾಜಭವನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದರು.ಬಿಜೆಪಿ ರಾಜಭವನವನ್ನು ದುರುಪಯೋಗಪಡಿಸಿಕೊಂಡಿರುವುದು ಅತ್ಯಂತ ಸ್ಪಷ್ಟವಾಗಿದೆ. ತಮಿಳುನಾಡು, ಮಹಾರಾಷ್ಟ್ರ, ಜಾರ್ಖಂಡ್, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಅವರು ಅಧಿಕಾರವನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಅದರಲ್ಲಿ ಯಾವುದೇ ಅನುಮಾನವಿಲ್ಲ. ಇತರ ಬಿಜೆಪಿ ರಾಜ್ಯಪಾಲರಿಗೆ ಹೋಲಿಸಿದರೆ ನಮ್ಮ ರಾಜ್ಯಪಾಲರು ಉತ್ತಮ ಆದರೆ, ಅವರ ಕೂಡಾ ಬಿಜೆಪಿಯ ಕೈಗೊಂಬೆಯಾಗಿದ್ದಾರೆ. ಅವರು ನೋಟಿಸ್ ನೀಡಿರುವುದು ವಿಷಾಧನೀಯ ಮತ್ತು ಅಸಂವಿಧಾನಿಕ ಎಂದರು.
ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿರುವುದು ತಪ್ಪು ಎಂದು ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಹೇಳಿದರು. ಸಚಿವ ಸಂಪುಟ ಸಭೆ ಬಳಿಕ ಎಲ್ಲಾವನ್ನು ವಿವರಿಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
