ನವದೆಹಲಿ:
ಪಕ್ಷದ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಮುದ್ರೆ ಇದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ಶನಿವಾರ ತಿರುಗೇಟು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚರಿತ್ರೆಯ ಅರಿವು ಇಲ್ಲ. ಏಕೆಂದರೆ 1940ರ ದಶಕದ ಆರಂಭದಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರೇ ಬಂಗಾಳದಲ್ಲಿ ಮುಸ್ಲಿಂ ಲೀಗ್ ಜೊತೆ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದರು. ಬಿಜೆಪಿಯು “ಒಡೆದು ಆಳುವ ರಾಜಕಾರಣ” ಮಾಡುತ್ತಿದೆ ಎಂದು ಆರೋಪಿಸಿದೆ.
ಸಹರಾನ್‌ಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಮುದ್ರೆ ಇದೆ, ಆದರೆ ಅದರಲ್ಲಿ ಎಡಪಂಥೀಯರ ಪ್ರಾಬಲ್ಯವಿದೆ ಎಂದು ಹೇಳಿದ್ದರು.
ಪ್ರಧಾನಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಪ್ರಧಾನಿ ಅವರಿಗೆ ಅವರ ಇತಿಹಾಸ ತಿಳಿದಿಲ್ಲ, ವಾಸ್ತವವಾಗಿ, ಆಗ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದವರು ಮುಖರ್ಜಿಯ ಹೊರತು ಬೇರೆ ಯಾರೂ ಅಲ್ಲ, ಅವರು ಸ್ವತಃ ಬಂಗಾಳದಲ್ಲಿ ಮುಸ್ಲಿಂ ಲೀಗ್ ಜೊತೆಗಿನ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದರು. ಸಿಂಧ್ ಹಾಗೂ ವಾಯುವ್ಯ ಪ್ರದೇಶದಲ್ಲೂ ಮುಸ್ಲಿಂ ಲೀಗ್ ಜೊತೆಗೆ ಹಿಂದೂ ಮಹಾಸಭಾ ಹೊಂದಾಣಿಕೆ ಮಾಡಿಕೊಂಡಿತ್ತು ಎಂದು ತಿರುಗೇಟು ನೀಡಿದರು. ಒಡೆದು ಆಳುವ ರಾಜಕಾರಣದಲ್ಲಿ ನಂಬಿಕೆ ಮತ್ತು ಆಚರಣೆ ಮಾಡುತ್ತಿರುವುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಎಂದು ರಮೇಶ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಅವರ ಸಮ್ಮುಖದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿತ್ತು. ಪ್ರಣಾಳಿಕೆಗೆ ನ್ಯಾಯ ಪತ್ರ ಎಂದು ಹೆಸರಿಟ್ಟಿರುವ ಕಾಂಗ್ರೆಸ್, 25 ಗ್ಯಾರಂಟಿಗಳನ್ನು ಘೋಷಿಸಿದೆ.