ಹಿಂದೂಗಳ ಹತ್ಯೆಯಾದರೆ ಬಿಜೆಪಿಗೆ ಹಬ್ಬ : ಸಚಿವರ ಹೇಳಿಕೆಯ ಮರ್ಮವಾದರೂ ಏನು….?

ಹುಬ್ಬಳ್ಳಿ

    ರಾಜ್ಯದಲ್ಲಿ ಅನೇಕ ಹಿಂದೂ ಮಹಿಳೆಯರ ಹತ್ಯೆ ಹಾಗೂ ದೌರ್ಜನ್ಯ ನಡೆದರೆ ಪ್ರತಿಭಟನೆ ನಡೆಸದ ಬಿಜೆಪಿ, ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕ ಹಿಂದೂ ವಿದ್ಯಾರ್ಥಿನಿಯನ್ನು ಕೊಲೆ ಮಾಡಿರುವುದರಿಂದ ಪ್ರಚಾರ ಪಡೆಯುತ್ತಿದೆ. ಬಿಜೆಪಿಗೆ ಹಿಂದೂಗಳ ಹತ್ಯೆಯಾದರೆ ಹಬ್ಬ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.

    ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಹತ್ಯೆಗೀಡಾದ ನೇಹಾ ಹಿರೇಮಠ ಮನೆಯನ್ನು ಬಿಜೆಪಿಯವರು ಪ್ರಚಾರ ತಾಣವನ್ನಾಗಿಸಿಕೊಂಡಿದ್ದಾರೆ. ಬಿಜೆಪಿ ನಾಯಕರು ನಿತ್ಯ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರ ಮನಸ್ಸಿಗೆ ನೋವು ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಯಾವುದೇ ರೀತಿಯ ಹಿನ್ನಡೆಯಾಗುವುದಿಲ್ಲ ಎಂದರು.

    ಕೊಲೆಗೀಡಾದ ವಿದ್ಯಾರ್ಥಿನಿ ನೇಹಾಳ ತಂದೆ ನಿರಂಜನ ಹಿರೇಮಠ ನನ್ನ ಸ್ನೇಹಿತ. ಬಿಜೆಪಿಯವರು ನಿಮ್ಮನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ನೈಜತೆ ನಿರಂಜನ ಅವರಿಗೆ ತಿಳಿಯಬೇಕು. ಆ ಕುಟುಂಬದ ದುಃಖ ನಮಗೆ ಅರ್ಥವಾಗುತ್ತದೆ. ಕೈ ಮುಗಿದು ಕೇಳುತ್ತೇನೆ ಪಕ್ಷದ ಬಗ್ಗೆ ಮಾಡನಾಡುವುದನ್ನು ಬಿಡಬೇಕು ಎಂದು ಹೇಳಿದರು.

    ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮೊದಲ ಬಾರಿಗೆ ಶಾಸಕರಾದವರು. ಯಡಿಯೂರಪ್ಪ ಅವರ ಹೆಸರು ಇಲ್ಲದಿದ್ದರೆ ವಿಜಯೇಂದ್ರ ಶೂನ್ಯ. ಅಂತವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ವಿಜಯೇಂದ್ರ ಅವರು ತಕ್ಷಣ ಮುಖ್ಯಮಂತ್ರಿಯವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ