ನವದೆಹಲಿ:
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಸ್ಥಾನಗಳ ಸ್ಪರ್ಧೆಯಲ್ಲಿ ಜೆಡಿಎಸ್ ಗೆ 2 ಸ್ಥಾನಗಳನ್ನು ಬಿಟ್ಟುಕೊಟ್ಟು ಬಿಜೆಪಿ 26 ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆಯೇ ಎಂಬ ಅನುಮಾನ ದಟ್ಟವಾಗಿದೆ. ಇದಕ್ಕೆ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ದೆಹಲಿಯಲ್ಲಿ ಕಳೆದ ರಾತ್ರಿ ಮಾಧ್ಯಮ ಪ್ರತಿನಿಧಿಗಳ ಮುಂದೆ ನೀಡಿರುವ ಹೇಳಿಕೆ.
ನಿನ್ನೆ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ, ಅಂತಿಮವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಮೈತ್ರಿಯಲ್ಲಿ ಸಹಜವಾಗಿ ಜೆಡಿಎಸ್ ಗೆ ಎರಡು ಸ್ಥಾನಗಳನ್ನು ನೀಡಬೇಕಾಗುತ್ತದೆ, ಆದರೆ ಆ ಎರಡು ಸೀಟುಗಳು ಯಾವ ಕ್ಷೇತ್ರಗಳು ಎಂದು ಇನ್ನೂ ತೀರ್ಮಾನವಾಗಿಲ್ಲ. ಎಲ್ಲಾ ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿರುವುದಂತೂ ನಿಜ ಎಂದಷ್ಟೇ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯ ಚರ್ಚೆ ಬಗ್ಗೆ ಮಾಹಿತಿ ನೀಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆಯಾಗಿದೆ. ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗಿದೆ. ಮುಂದಿನ ಸಿಇಸಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಇಂದು ಪಟ್ಟಿ ಬಿಡುಗಡೆ ಮಾಡುವುದಿಲ್ಲ, ನಾಳೆ ಬಿಡುಗಡೆ ಆಗಬಹುದು ಎಂದರು.
ಕಗ್ಗಂಟಾಗಿರುವ ಕ್ಷೇತ್ರಗಳು:
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳ ಆಯ್ಕೆ ಬಿಜೆಪಿ ನಾಯಕರಿಗೆ ಅಷ್ಟು ಸುಲಭವಾಗಿರುವಂತೆ ಕಾಣುತ್ತಿಲ್ಲ. ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಉತ್ತರ ಕನ್ನಡ ಅನಂತಕುಮಾರ್ ಹೆಗಡೆ, ಬೀದರ್ ಕ್ಷೇತ್ರದ ಭಗವಂತ್ ಖೂಬಾ, ದಾವಣಗೆರೆಯ ಸಿದ್ದೇಶ್ವರ್ಗೆ ಈ ಬಾರಿ ಲೋಕಸಭಾ ಟಿಕೆಟ್ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
