ಸಿಎಂ ನಿವಾಸ ಮುತ್ತಿಗೆ ಯತ್ನ : ಬಿಜೆಪಿ ನಾಯಕರ ಬಂಧನ ….!

ಬೆಂಗಳೂರು:

    ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಿಂದ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ನಾಯಕರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಮತ್ತು ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ ದಾರಿ ಮಧ್ಯೆಯೇ ಬಿಜೆಪಿ ನಾಯಕರನ್ನು ತಡೆದ ಪೊಲೀಸರು, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

   ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಖಂಡಿಸಿ ಇಂದು ಪ್ರತಿಭಟನಾ ಮೆರವಣಿಗೆ ಮೂಲಕ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಪೊಲೀಸರು ಕುಮಾರ ಕೃಪಾ ಗೆಸ್ಟ್ ಹೌಸ್ ರಸ್ತೆಯಲ್ಲಿ ವಶಕ್ಕೆ ಪಡೆದರು.

   ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಸಚಿವರಾದ ಎಸ್ ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ, ಎಸ್ ಸುರೇಶ್ ಕುಮಾರ್, ಸಿ ಎನ್ ಅಶ್ವಥ್ ನಾರಾಯಣ್, ಸಿ ಟಿ ರವಿ ಸೇರಿದಂತೆ ಪಕ್ಷದ ಮುಖಂಡರು, ಹಲವು ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

   ಇನ್ನು ಪೊಲೀಸರ ನಡೆಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ನಾವೇನು ತುರ್ತುಪರಿಸ್ಥಿತಿಯಲ್ಲಿ ಇದ್ದೇವಾ? ಎಂದು ಕಿಡಿಕಾರಿದರು. ಬಳಿಕ ಪೊಲೀಸರು ಅಶೋಕ್ ಅವರನ್ನು ವಶಕ್ಕೆ ಪಡೆದುಕೊಂಡರು.

   ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ(ಮುಡಾ) ಸುಮಾರು 4,000 ಕೋಟಿ ರೂಪಾಯಿ ಮೌಲ್ಯದ ಪರ್ಯಾಯ ನಿವೇಶನ(ಪ್ಲಾಟ್‌ಗಳು) ಹಗರಣ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಫಲಾನುಭವಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

   180 ಕೋಟಿ ರೂ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಗಳು ನಡೆದಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಅಲ್ಲದೆ ಸಿಬಿಐ ತನಿಖೆಗೆ ವಹಿಸದಿದ್ದಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಚ್ಚರಿಕೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap